ADVERTISEMENT

ಹಣ ಅಕ್ರಮ ವರ್ಗಾವಣೆ: ಡಿ.ಕೆ. ಶಿವಕುಮಾರ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:15 IST
Last Updated 2 ಆಗಸ್ಟ್ 2022, 21:15 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಇತರ ನಾಲ್ವರು ಆರೋಪಿಗಳಿಗೆ ಇಲ್ಲಿನ ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ (ಇ.ಡಿ. ನ್ಯಾಯಾಲಯ) ಮಂಗಳವಾರ ಜಾಮೀನು ನೀಡಿದೆ.

ಶಿವಕುಮಾರ್‌ ಹಾಗೂ ಇತರ ಆರೋಪಿಗಳ ವಕೀಲರು ಹಾಗೂ ಇ.ಡಿ. ವಕೀಲರ ವಾದವನ್ನು ಆಲಿಸಿದ್ದವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್‌ ದುಲ್‌ ಅವರು ಜಾಮೀನು ಆದೇಶವನ್ನು ಶನಿವಾರ ಕಾಯ್ದಿರಿಸಿದ್ದರು.
ಮಂಗಳವಾರ ಜಾಮೀನು ಆದೇಶ ಪ್ರಕಟಿಸಿದ ಅವರು, ‘ಪ್ರತಿಯೊಬ್ಬ ಆರೋಪಿ ತಲಾ ₹1 ಲಕ್ಷದ ಬಾಂಡ್‌ ಅನ್ನು ಖಾತರಿಯಾಗಿ ನೀಡಬೇಕು. ಅನುಮತಿಯಿಲ್ಲದೆ ವಿದೇಶ ‍ಪ್ರವಾಸ ಮಾಡಬಾರದು. ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು’ ಎಂದು ಸೂಚಿಸಿದರು.

ಶಿವಕುಮಾರ್‌, ಅವರ ನಿಕಟವರ್ತಿಗಳಾದ ಉದ್ಯಮಿ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ ಮಾಲೀಕ ಸುನೀಲ್‌ ಕುಮಾರ್‌ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್‌. ವಿರುದ್ಧ ವಿಚಾರಣೆ ಆರಂಭಿಸುವಂತೆ ಕೋರಿ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು. ಈ ವರದಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಎಲ್ಲ ಆರೋಪಿಗಳಿಗೂ ಸಮನ್ಸ್‌ ಜಾರಿ ಮಾಡಿತ್ತು.

ADVERTISEMENT

2017ರಲ್ಲಿ ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಆಗ, ದೆಹಲಿಯ ವಿವಿಧ ಸ್ಥಳಗಳಲ್ಲಿ ₹8.59 ಕೋಟಿ ನಗದು ವಶಕ್ಕೆ ಪಡೆಯಲಾಗಿತ್ತು. ಬಳಿಕ ಶಿವಕುಮಾರ್‌ ಅವರನ್ನು ಬಂಧಿಸಲಾಯಿತು. ನಂತರ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.ಎಲ್ಲ ಆರೋಪಿಗಳಿಗೆ ದೆಹಲಿ ಹೈಕೋರ್ಟ್‌ ಈ ಹಿಂದೆ ಮಧ್ಯಂತರ ಜಾಮೀನು ನೀಡಿತ್ತು.

ನ್ಯಾಯ ಸಿಕ್ಕಿದೆ: ಶಿವಕುಮಾರ್‌

‘ನಾವು ಯಾವುದೇ ತಪ್ಪು ಮಾಡಿಲ್ಲ. ಕೃಷಿ ಹಾಗೂ ವ್ಯವಹಾರ ಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಇದ್ದೇವೆ. 2017ರಲ್ಲಿ ಗುಜರಾತ್‌ ರಾಜ್ಯಸಭಾ ಚುನಾವಣೆಯ ಬಳಿಕ ಆದಾಯ ತೆರಿಗೆ ಇಲಾಖೆಯವರು ನನ್ನ ಮನೆಯ ಮೇಲೆ ದಾಳಿ ಮಾಡಿದರು. ಬಳಿಕ ಪ್ರಕರಣವನ್ನು ಇ.ಡಿ.ಗೆ ಹಸ್ತಾಂತರಿಸಿದರು. ಈಗ ನ್ಯಾಯಾಧೀಶರು ಜಾಮೀನು ನೀಡಿದ್ದು, ನ್ಯಾಯ ಸಿಕ್ಕಿದೆ’ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು,‘ನನ್ನ ನಾಲ್ಕು ಗೆಳೆಯರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಇದರಿಂದ ಮನಸ್ಸಿಗೆ ಬಹಳ ಬೇಸರವಾಗಿತ್ತು. ಈಗ ಅವರಿಗೂ ಜಾಮೀನು ಸಿಕ್ಕಿದ್ದು ಹೆಚ್ಚು ಖುಷಿ ಕೊಟ್ಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.