ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಸಿದ್ನಾಳ ಗ್ರಾಮದ ಅಕ್ಕೋಳ– ಸಿದ್ನಾಳ ಸೇತುವೆ ಜಲಾವೃತಗೊಂಡಿದೆ (ಎಡಚಿತ್ರ) ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಳೆಯ ನಡುವೆಯೇ ವಾಹನಗಳು ನಿಧಾನವಾಗಿ ಸಾಗಿದವು
ಮೈಸೂರು/ಶಿವಮೊಗ್ಗ: ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಸೋಮವಾರ ಬಿರುಸಿನ ಮಳೆಯಾಗಿದೆ.
ಹಲವೆಡೆ ಆಸ್ತಿ, ಬೆಳೆ, ಮನೆ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಮರಗಳು ಬಿದ್ದಿವೆ. ಕೊಡಗಿನ ಅಮ್ಮತ್ತಿ ಹೋಬಳಿಯ ಕರಡಿಗೋಡು ಗ್ರಾಮದ ಹೊಳೆಕೆರೆ ಭಾಗದ ಕಾವೇರಿ ನದಿಯಿಂದ ರಸ್ತೆಗೆ 3 ಅಡಿ ನೀರು ಬಂದಿದ್ದು, ಪ್ರವಾಹದ ಭೀತಿ ಸೃಷ್ಟಿಸಿದೆ. ಮುಂಜಾಗ್ರತಾ ಕ್ರಮವಾಗಿ ಕುಶಾಲನಗರದಲ್ಲಿ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್ ನೀಡಲಾಗಿದೆ.
ಶಿವಮೊಗ್ಗ ಭಾಗದ ಮಲೆನಾಡಿನಲ್ಲಿ ಮಳೆ ಸೋಮವಾರ ಕೊಂಚ ತಗ್ಗಿದೆ.
ಕೊಡಗು ಜಿಲ್ಲೆಯ ಚಿಕ್ಲಿಹೊಳೆ ಜಲಾಶಯ ತುಂಬಿ ಕೋಡಿ ಬಿದ್ದಿದೆ. ಜಲಪಾತಗಳು, ನದಿ, ತೊರೆಗಳಲ್ಲಿ ನೀರಿಗೆ ಇಳಿಯುವುದನ್ನು ಹಾಗೂ ಭಾರಿ ತೂಕದ ವಾಹನಗಳ ಸಂಚಾರ ನಿರ್ಬಂಧಿಸ ಲಾಗಿದೆ. ಎನ್‌ಡಿಆರ್‌ಎಫ್ ಕೊಡಗಿಗೆ ಬಂದಿದೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 5 ಅಡಿ ಹೆಚ್ಚಾಗಿದೆ. ಒಳಹರಿವು 2,683 ಕ್ಯುಸೆಕ್‌ನಿಂದ 19ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾ ಶಯದಲ್ಲಿ 2 ಅಡಿ ಹೆಚ್ಚಿದೆ. ಹಾಸನದ ಹೇಮಾವತಿ ಜಲಾಶಯದ ಒಳಹರಿವು 6,345 ಕ್ಯೂಸೆಕ್‌ಗೆ ಏರಿಕೆಯಾಗಿದೆ.
ನೀಲಗಿರಿ ಜಿಲ್ಲೆಯ ಪ್ರವಾಸಿ ತಾಣಗಳಾದ ದೊಡ್ಡಬೆಟ್ಟ, ಪೈನ್ ಫಾರೆಸ್ಟ್, ಲ್ಯಾಂಬ್ಸ್ ರಾಕ್, ಆವಲಂಚಿ, 9ನೇ ಮೈಲ್ ಶೂಟಿಂಗ್ ಪಾಯಿಂಟ್, ಬೋಟ್ ಹೌಸ್, ಪೈಕಾರ ಹಾಗೂ ಊಟಿಯ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಸುಕಿನಲ್ಲಿ ಮಳೆ ಸುರಿಯಿತು. ‘ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ದಲ್ಲಿ ಮಳೆ ಅಬ್ಬರವಿದ್ದು, ವೇದಗಂಗಾ ನದಿ ಹರಿವಿನ ಪ್ರಮಾಣ ಹೆಚ್ಚಾಗಿದೆ. ನಿಪ್ಪಾಣಿ ತಾಲ್ಲೂಕಿನಲ್ಲಿ ಅಕ್ಕೋಳ-ಸಿದ್ನಾಳ ಸೇತುವೆ ಜಲಾವೃತಗೊಂಡಿದೆ. ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ’ ಎಂದು ತಹಶೀಲ್ದಾರ್ ಮುಜಫ್ಫರ್ ಬಳಿಗಾರ ತಿಳಿಸಿದ್ದಾರೆ.
ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಈ ಮಾರ್ಗದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ತಾತ್ಕಾಲಿಕ ಸೇತುವೆಗೆ ತಾಗಿಕೊಂಡು ನೀರು ಹರಿಯುತ್ತಿದೆ. ಸೇತುವೆ ಕಿರಿದಾಗಿದ್ದರಿಂದ ಮುಂಜಾ ಗ್ರತಾ ಕ್ರಮವಾಗಿ ಸಂಚಾರ ಬಂದ್ ಮಾಡಲಾಗಿದೆ. ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಉಂಟಾಗಿದ್ದು, ಸೋಮವಾರ ಬೆಳಿಗ್ಗೆ ಹೊತ್ತಿಗೆ 6,595 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ವಿಜಯಪುರದ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಿದೆ. 52,650 ಕ್ಯುಸೆಕ್ (4.54 ಟಿಎಂಸಿ ಅಡಿ) ನೀರು ಹರಿದು ಬಂದಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಕಾರಣ, ಸೋಮೇಶ್ವರದಲ್ಲಿ ಕಡಲ್ಕೊರೆತ ಹಾವಳಿ ಮತ್ತೆ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಾದ ಮುಳ್ಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ ಪ್ರದೇಶಗಳಲ್ಲಿಯೂ ಮಳೆ ಎಡೆಬಿಡದೆ ಸುರಿಯುತು.
ಭಾರಿ ಮಳೆಯಿಂದಾಗಿ ಮಂಗಳೂರಿನ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಸೋಮವಾರ ಜಲಾವೃತವಾಗಿದ್ದ ರಸ್ತೆಯಲ್ಲೇ ವಾಹನಗಳು ಸಂಚರಿಸಿದವು.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸೋಮವಾರ ಮೋಡ ಕವಿದ ವಾತಾವರಣದೊಂದಿಗೆ ದಿನವಿಡೀ ಮಳೆಯಾಯಿತು. ಯಾದಗಿರಿಯ ಕೆಂಭಾವಿಯ ಯುಕೆಪಿ ಕ್ಯಾಂಪಿನ ಗೋಡೆ ಕುಸಿದು ಬಿದ್ದಿದೆ.
ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಪುತ್ತಿಗೆ ಎರುಗುಂಡಿ ಜಲಪಾತ ವೀಕ್ಷಿಸಲು ತೆರಳಿದ್ದ ಪ್ರವಾಸಿಗರ ತಂಡವೊಂಡು ಭಾರಿ ಮಳೆಯಿಂದಾಗಿ ಉಕ್ಕಿ ಹರಿದ ಹಳ್ಳದ ನಡುವಿನ ಬಂಡೆಯಲ್ಲಿ ಸೋಮವಾರ ಸಿಲುಕಿತ್ತು. ತಂಡದಲ್ಲಿದ್ದ ಮಂಗಳೂರಿನ ಆರು ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದರು.
ಎರುಗುಂಡಿ ಜಲಪಾತದ ಬಳಿಯ ಹಳ್ಳದಲ್ಲಿ ಮಳೆಯ ನೀರು ತುಂಬಿ ಹರಿಯುತ್ತಿತ್ತು. ಅಪಾಯವನ್ನು ನಿರ್ಲಕ್ಷಿಸಿ ಯುವಕರು ಜಲಪಾತಕ್ಕೆ ಇಳಿದಿದ್ದರು. ಈ ವೇಳೆ ನೀರಿನ ಹರಿವು ಏಕಾಏಕಿ ಏರಿಕೆಯಾಗಿತ್ತು. ಯುವಕರು ಹಳ್ಳದ ನಡುವಿನ ಬಂಡೆಯಲ್ಲಿ ಸಿಲುಕಿದ್ದರು. ನೀರಿನ ರಭಸ ಹೆಚ್ಚಿದ್ದರಿಂದ ಅವರು ದಡಕ್ಕೆ ತಲುಪಲಾಗದೇ ಜೀವ ರಕ್ಷಣೆಗಾಗಿ ಕಿರುಚಲಾರಂಭಿಸಿದ್ದರು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿ ಮೀನು ಹಿಡಿಯುತ್ತಿದ್ದ ಸ್ಥಳೀಯರು ಧಾವಿಸಿ ಹಗ್ಗದ ಸಹಾಯದಿಂದ ಯುವಕರನ್ನು ರಕ್ಷಿಸಿದರು. ಈ ಘಟನೆಯ ನಂತರ ಪುತ್ತಿಗೆ ಗ್ರಾಮ ಪಂಚಾಯತಿಯು ಎರುಗುಂಡಿ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. ಈ ಕುರಿತು ಎಚ್ಚರಿಕೆ ನೀಡುವ ಬ್ಯಾನರನ್ನು ಸ್ಥಳದಲ್ಲಿ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.