ADVERTISEMENT

ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಪೋಲು

ಹೆಚ್ಚುವರಿ ಲಸಿಕೆ ಬಳಕೆಯಲ್ಲಿ ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ ಮುಂದು

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 17:55 IST
Last Updated 28 ಜೂನ್ 2021, 17:55 IST
   

ಹುಬ್ಬಳ್ಳಿ: ಕರ್ನಾಟಕದಲ್ಲಿ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ಪೋಲಾಗಿದೆ. ಲಸಿಕೆ ಪೋಲಾಗಿರುವ ಜಿಲ್ಲೆಗಳಲ್ಲಿ ಬಾಗಲಕೋಟೆ ಮೊದಲ ಹಾಗೂ ಹಾಸನ ಎರಡನೇ ಸ್ಥಾನದಲ್ಲಿವೆ.

ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಗೊಂಡ ಜನವರಿ 16ರಿಂದ ಇಲ್ಲಿಯವರೆಗೆ (ಜೂನ್ 25) ಬಾಗಲಕೋಟೆಯಲ್ಲಿ 22,196 (ಶೇ 12.66) ಪೋಲಾಗಿದ್ದರೆ, ಹಾಸನದಲ್ಲಿ 17,028 (ಶೇ 8.01) ವ್ಯರ್ಥ ಆಗಿವೆ.

ಜಿಲ್ಲಾಧಿಕಾರಿಯೊಬ್ಬರು ನೀಡಿರುವ ದಾಖಲೆಗಳ ಪ್ರಕಾರ,ರಾಜ್ಯದ 20 ಜಿಲ್ಲೆಗಳಲ್ಲಿ ಸರಾಸರಿ ಶೇ 2.29ರಷ್ಟು ವ್ಯರ್ಥವಾಗಿದ್ದರೆ, ಉಳಿದ ಹತ್ತು ಜಿಲ್ಲೆಗಳ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನಿಗದಿತ ಗುರಿಗಿಂತ ಹೆಚ್ಚಿನ ಲಸಿಕೆಗಳನ್ನು ಹಾಕಿರುವ ಶಿವಮೊಗ್ಗದಲ್ಲಿ ಶೇ –6, ಉಡುಪಿ ಶೇ –5.57, ದಕ್ಷಿಣ ಕನ್ನಡ ಶೇ –4.71, ಧಾರವಾಡ ಶೇ 4.25, ಹಾವೇರಿ ಶೇ 4.16, ಉತ್ತರಕನ್ನಡ ಶೇ –3.65, ಚಿಕ್ಕಮಗಳೂರು ಶೇ –2.25, ಬೆಳಗಾವಿ ಶೇ –1.72, ಕೊಡಗುಶೇ –1.36, ಬೆಂಗಳೂರು (ಬಿಬಿಎಂಪಿ) ಶೇ –1.29 ಹಾಗೂ ಮೈಸೂರಿನಲ್ಲಿ ಶೇ –0.13 ಇದೆ.

ADVERTISEMENT

11 ಎಂಎಲ್‌ ಲಸಿಕೆಗಳನ್ನು ಒಳಗೊಂಡ ಪ್ರತಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ವಯಲ್ಸ್‌ ಅನ್ನು, ಗರಿಷ್ಠ 4 ತಾಸು ತೆರೆದಿಡಬಹುದಾಗಿದೆ. ಅಷ್ಟರಲ್ಲಿ ಬಳಸದಿದ್ದರೆ ವ್ಯರ್ಥವಾಗುತ್ತವೆ. ಒಂದು ವಯಲ್ಸ್ ತೆರೆದರೆ ಕನಿಷ್ಠ 10 ಮಂದಿಗೆ ನೀಡಬೇಕು. ಆದರೆ, ಆರಂಭಿಕ ಹಂತದಲ್ಲಿ 10ಕ್ಕಿಂತಲೂ ಕಡಿಮೆ ಮಂದಿಗೆ ನೀಡಲಾಗಿದೆ. ಇದರಿಂದಾಗಿ, ಹೆಚ್ಚಿನ ಲಸಿಕೆಗಳು ಪೋಲಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲಸಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು, ಹೆಚ್ಚುವರಿ ಲಸಿಕೆಗಳನ್ನು ಬಳಸಿರುವುದನ್ನು ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ ಲಸಿಕೆ ಪೋಲಾಗದಂತೆ ನಿಗಾ ವಹಿಸಲಾಗಿದೆ. ನಮಗೆ ನಿಗದಿಗಿಂತ ಶೇ 4.25 ಹೆಚ್ಚುವರಿ ಡೋಸ್ ಸಿಕ್ಕಿದ್ದು, 8,786 ಮಂದಿಗೆ ಅವುಗಳನ್ನು ನೀಡಲಾಗಿದೆ’ ಎಂದರು.

ಈ ಕುರಿತು ಪ್ರತಿಕ್ರಿಯೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗನಿರೋಧ ವಿಭಾಗದ ಉಪ ನಿರ್ದೇಶಕರಾದ ಡಾ.ರಜನಿ ನಾಗೇಶ್‌ರಾವ್ ಮತ್ತು ಡಾ. ಅರುಂಧತಿ ಚಂದ್ರಶೇಖರ್ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ.

‘ತಪ್ಪು ಮಾಹಿತಿ ದಾಖಲು’
ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಪ್ರತಿಕ್ರಿಯಿಸಿ, ‘ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಸೇರಿ, ಜಿಲ್ಲೆಯಲ್ಲಿ ಗುಳೇದಗುಡ್ಡ ತಾಲ್ಲೂಕಿಗೆ 54,800 ಡೋಸ್ ಲಸಿಕೆ ಪೂರೈಸಲಾಗಿದೆ. ಅಷ್ಟೂ ಬಳಕೆಯಾಗಿವೆ. ಆದರೆ, ಇಲಾಖೆಯ ಪೋರ್ಟಲ್‌ನಲ್ಲಿ ಅಲ್ಲಿನ ಸಿಬ್ಬಂದಿ 34,300 ಡೋಸ್ ಬಳಕೆಯಾಗಿವೆ ಎಂದು ತಪ್ಪಾಗಿ ಉಲ್ಲೇಖಿಸಿದ್ದಾರೆ. ಅವರ ಲೆಕ್ಕದಲ್ಲಿ 20 ಸಾವಿರಕ್ಕೂ ಹೆಚ್ಚು ಡೋಸ್ ಹಾಳಾಗಿವೆ ಎಂಬಂತಾಗಿದೆ. ಈ ರೀತಿ ತಪ್ಪು ಮಾಹಿತಿ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಿದ್ದು, ಯಾವ ಹಂತದಲ್ಲಿ ಆ ತಪ್ಪಾಗಿದೆ ಎಂಬುದರ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.

ಲಸಿಕೆ ಅಭಿಯಾನ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ಹಾಗೂ ಲಸಿಕೆಗಳ ಬಳಕೆ ಮೇಲಿನ ನಿಗಾದಿಂದಾಗಿ, ಹೆಚ್ಚಿನ ಮಂದಿಗೆ ಲಸಿಕೆ ನೀಡಲಾಗಿದೆ.
-ಕೆ.ಬಿ. ಶಿವಕುಮಾರ್, ಶಿವಮೊಗ್ಗ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.