ADVERTISEMENT

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ: 8.60 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 16:00 IST
Last Updated 29 ಸೆಪ್ಟೆಂಬರ್ 2025, 16:00 IST
<div class="paragraphs"><p>ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಜ್‌ ಕಂ ಬ್ಯಾರೇಜ್‌ ಮುಳುಗಡೆಯಾಗಿರುವುದು</p></div>

ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಜ್‌ ಕಂ ಬ್ಯಾರೇಜ್‌ ಮುಳುಗಡೆಯಾಗಿರುವುದು

   

ಬೆಂಗಳೂರು: ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 8.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಅವರು, ಸಂತ್ರಸ್ತರ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ₹1,354 ಕೋಟಿ ಇದೆ. ಆ ಹಣವನ್ನು ಪರಿಹಾರ ವಿತರಣೆಗೆ ಬಳಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಮಳೆ ಸಂಪೂರ್ಣ ನಿಂತ ಬಳಿಕ ಬೆಳೆ ಸಮೀಕ್ಷೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ADVERTISEMENT

‘ಸುಮಾರು 75 ಕಡೆಗಳಲ್ಲಿ ನೆರವು ಕೇಂದ್ರಗಳನ್ನು ಸ್ಥಾಪಿಸಿದ್ದು, 8,919 ಜನ ಈ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇವರಿಗೆ ಊಟ, ವಸತಿ ಮತ್ತು ಮಲಗಿಕೊಳ್ಳುವುದಕ್ಕೂ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಈ ಬಾರಿ ವಾಡಿಕೆಗಿಂತ ಶೇ 4 ರಷ್ಟು ಹೆಚ್ಚು ಮಳೆ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಶೇ 58ಕ್ಕಿಂತ ಹೆಚ್ಚು ಮಳೆಯಾಗಿದೆ. ಮಲೆನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ ಎಂದರು.

‘ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಬೆಳೆ ಹಾನಿಯೂ ಹೆಚ್ಚಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಬಂದಿದೆ. ಉಜನಿ ಜಲಾಶಯದಿಂದ ಹೆಚ್ಚು ನೀರು ಬಿಡಲಾಗಿದೆ. ಭೀಮಾದಲ್ಲಿ 2.8 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಬೆಣ್ಣೆತೊರಾ, ಕಾಗಿಣ ನದಿಗಳಲ್ಲೂ ನೀರಿನ ಹರಿವು ಹೆಚ್ಚಾಗಿದೆ’ ಎಂದರು.

‘ಎಲ್ಲಿಯೂ ಪ್ರಾಣ ಹಾನಿಯಾಗಿಲ್ಲ. ಇದು ನಮಗೆ ಸಮಾಧಾನ ತಂದಿದೆ. ಬೆಳೆ ಹಾನಿಗೆ ಪರಿಹಾರ ಪಾವತಿಸುತ್ತೇವೆ. ಆಸ್ತಿಗಳಿಗೆ ಸೀಮಿತವಾಗಿ ಹಾನಿಯಾಗಿದೆ. ರಸ್ತೆ–ಮೋರಿಗಳಿಗೂ ಹಾನಿಯಾಗಿದೆ’ ಎಂದು ಸಚಿವರು ಹೇಳಿದರು.

‘ನಾವು ಒಂದು ತಿಂಗಳಿಂದ ಮಳೆ–ಪ್ರವಾಹ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷದ ನಾಯಕರು ಈಗ ನಿದ್ದೆಯಿಂದ ಎದ್ದಂತೆ ಕಾಣುತ್ತಿದೆ. ಹೀಗಾಗಿ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಬಂದು ಪರಿಶೀಲನೆ ನಡೆಸಲಿ. ಜನರಿಗೆ ಒಳ್ಳೆಯದಾಗಲಿ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.