ADVERTISEMENT

ಮೂರು ತಿಂಗಳಲ್ಲಿ ಮದ್ಯದ ನಶೆ ಜೋರು: ಅಬಕಾರಿ ಇಲಾಖೆಗೆ ₹7,278 ಕೋಟಿ ವರಮಾನ

ವಿಸ್ಕಿ, ಬ್ರಾಂದಿ, ರಮ್‌ಗಿಂತ ಬಿಯರ್‌ ಸೇವನೆಯೇ ಹೆಚ್ಚು

ವಿಜಯಕುಮಾರ್ ಎಸ್.ಕೆ.
Published 4 ಜೂನ್ 2022, 19:30 IST
Last Updated 4 ಜೂನ್ 2022, 19:30 IST
ಬಿಯರ್
ಬಿಯರ್   

ಬೆಂಗಳೂರು: ಮೂರು ತಿಂಗಳಲ್ಲಿ ರಾಜ್ಯದಲ್ಲಿ ಮದ್ಯ ಪ್ರಿಯರು ಮದ್ಯದ ನಶೆಯಲ್ಲಿ ತೇಲಿದ್ದಾರೆ. ಮದ್ಯ (ಐಎಂಎಲ್‌) ಮತ್ತು ಬಿಯರ್ ಮಾರಾಟದಲ್ಲಿ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದ್ದು, ವಿಸ್ಕಿ, ಬ್ರಾಂದಿ ಮತ್ತು ರಮ್‌ಗಿಂತ ಬಿಯರ್ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಮೂರೇ ತಿಂಗಳಲ್ಲಿ ಅಬಕಾರಿ ಇಲಾಖೆಗೆ ₹7,278 ಕೋಟಿ ವರಮಾನ ಸಂಗ್ರಹವಾಗಿದೆ.

ಕಳೆದ ಎರಡು ವರ್ಷ ಮಾರ್ಚ್‌ನಿಂದ ಜೂನ್‌ ತನಕ ಕೋವಿಡ್ ಕಾಡಿದ್ದರಿಂದ ಮದುವೆ, ಜಾತ್ರೆ, ಸಭೆ– ಸಮಾರಂಭಗಳಿಗೆ ಅವಕಾಶವೇ ಇರಲಿಲ್ಲ. ಈ ವರ್ಷ ಮಾರ್ಚ್‌ನಿಂದ ಮೇತನಕ ಶುಭ ಕಾರ್ಯಕ್ರಮಗಳು ಎಡಬಿಡದೆ ನಡೆದಿದ್ದು, ಮದ್ಯ ಮಾರಾಟ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ‘ನೈಟ್‌ಲೈಫ್’ ನಿರಾಳವಾಗಿ ನಡೆಯು
ತ್ತಿದ್ದು, ಬಿಯರ್ ಮಾರಾಟ ಹೆಚ್ಚಳಕ್ಕೆ ಇದು ಪ್ರಮುಖ ಕಾರಣ ಎನ್ನುತ್ತಾರೆ ಮದ್ಯದ ವ್ಯಾಪಾರಿಗಳು.

ಕಳೆದ 12 ವರ್ಷಗಳಲ್ಲಿ ಮದ್ಯ ಮತ್ತು ಬಿಯರ್ ಮಾರಾಟ ಆಗಿರುವ ಪ್ರಮಾಣ ಗಮನಿಸಿದರೆ ಈ ಮೂರು ತಿಂಗಳಲ್ಲಿ ಮಾರಾಟವಾಗಿರುವಷ್ಟು ಮದ್ಯಬೇರೆ ಯಾವ ತಿಂಗಳಿನಲ್ಲೂ ಆಗಿಲ್ಲ. ಇದರಿಂದ ಅಬಕಾರಿ ಇಲಾಖೆಗೆ ವರಮಾನ ನಿರೀಕ್ಷೆಗಿಂತ ಹೆಚ್ಚಿನ ವರಮಾನ ಸಂಗ್ರಹವಾಗಿದೆ. ಮಾರ್ಚ್‌ನಲ್ಲಿ ₹2,600 ಕೋಟಿ, ಏಪ್ರಿಲ್‌ನಲ್ಲಿ ₹2,402 ಕೋಟಿ, ಮೇ ತಿಂಗಳಿನಲ್ಲಿ ₹2,276 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳ ವರಮಾನಕ್ಕೆ ಹೋಲಿಸಿದರೆ ಎರಡೇ ತಿಂಗಳಲ್ಲಿ ₹1,001 ಕೋಟಿ ಹೆಚ್ಚುವರಿ ವರಮಾನ ಸಂಗ್ರಹವಾಗಿದ್ದು, ಶೇ 27.25ರಷ್ಟು ವರಮಾನ ಹೆಚ್ಚಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

2017–18, 2018–19ನೇ ಸಾಲಿನಲ್ಲಿ ಬಿಯರ್ ಮಾರಾಟ ಕ್ರಮವಾಗಿ ಶೇ 8.83 ಮತ್ತು ಶೇ 13.20ರಷ್ಟು ಏರಿಕೆಯಾಗಿತ್ತು. ಆದರೆ, 2019–20 ಮತ್ತು 2020–21ನೇ ಸಾಲಿನಲ್ಲಿ ಕ್ರಮವಾಗಿ ಶೇ 3.74 ಮತ್ತು ಶೇ 17.88ರಷ್ಟು ಇಳಿಕೆ ಕಂಡಿತ್ತು. 2021–22ನೇ ಸಾಲಿನಲ್ಲಿ ಬಿಯರ್ ಮಾರಾಟ ಶೇ 13.04 ರಷ್ಟು ಏರಿಕೆಯಾಗಿತ್ತು. ಪ್ರಸಕ್ತ ಸಾಲಿನಲ್ಲೂ ಬಿಯರ್ ಮಾರಾಟ ಕಳೆದ ಸಾಲಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಅಬಕಾರಿ ಇಲಾಖೆಯ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.