ADVERTISEMENT

ಕೊಪ್ಪಳ: ಮೂವರು ಮಕ್ಕಳ ಹತ್ಯೆ ಮಾಡಿ ನೇಣಿಗೆ ಶರಣಾದ ತಾಯಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 16:04 IST
Last Updated 18 ಜೂನ್ 2019, 16:04 IST
   

ಕೊಪ್ಪಳ: ಮುದ್ದು ಮುಖದ ಆ ಪುಟ್ಟ ಹುಡುಗಿ ಅಕ್ಷತಾ ಸೋಮವಾರವಷ್ಟೇ ಶಾಲೆಗೆ ಬಂದಿದ್ದಳು. ಪಾಲಕರು ಹೆಸರು ನೋಂದಣಿ ಮಾಡಿಸಿ ಹೋಗಿದ್ದರು. ಮೊದಲ ದಿನವೇ ಶಾಲೆಯ ಮುಂದೆ ತನ್ನ ಹೆಸರಿನಲ್ಲಿ ಸಸಿ ನೆಟ್ಟು ಸಂಭ್ರಮಿಸಿದ್ದಳು. ದಿನ ಕಳೆಯುಷ್ಟರಲ್ಲಿ ಲೋಕವನ್ನೇ ಬಿಟ್ಟಿದ್ದಾಳೆ. ಆಕೆ ನೆಟ್ಟ ಪುಟ್ಟ ಸಸಿ ಮಾತ್ರ ಉಳಿದಿದೆ...

ಕುಕನೂರ ತಾಲ್ಲೂಕಿನ ತಾಲ್ಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ತಾಯಿಯಿಂದಲೇ ಕೊಲೆಗೀಡಾದ ಅಕ್ಷತಾಳ ಕೊನೆಯ ದಿನವನ್ನುಶಾಲೆಯ ಶಿಕ್ಷಕರು ಸ್ಮರಿಸಿದ್ದು ಹೀಗೆ.

ಯಲ್ಲಮ್ಮ ಉಮೇಶ ಬಾರಕೇರ ಎಂಬ ಮಹಿಳೆ ತನ್ನ ಮೂವರು ಮಕ್ಕಳಾದ ಅಕ್ಷತಾ, ಕಾವ್ಯಾ ಮತ್ತು ನಾಗರಾಜನನ್ನು ಮನೆಯಲ್ಲಿ ನೀರಿನ ಪಾತ್ರೆಯಲ್ಲಿ ಮುಳುಗಿಸಿ ಕೊಂದು, ತಾನೂ ಆತ್ನಹತ್ಯೆ ಮಾಡಿಕೊಂಡಿದ್ದಾಳೆ. ಇಡೀ ಗ್ರಾಮದಲ್ಲೀಗ ಸೂತಕ ಮನೆಮಾಡಿದೆ. ಎಲ್ಲರ ಬಾಯಲ್ಲೂ ಎಳೆಯ ಮಕ್ಕಳ ಆಟ, ಪಾಠದ್ದೇ ಮಾತು.

ADVERTISEMENT

ಈ ಗ್ರಾಮದಲ್ಲಿ ಬಾರಕೇರ (ಪಾತ್ರೆ ತೊಳೆಯುವ, ಮೀನು ಹಿಡಿಯುವ ಕಾಯಕ) ಜಾತಿಗೆ ಸೇರಿದ ಎರಡೇ ಮನೆತನ ಇವೆ. ಈ ಮಕ್ಕಳ ತಂದೆ ಉಮೇಶ ನಿತ್ಯವೂ ಕುಡಿದು ಬಂದು ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಯಲ್ಲಮ್ಮ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಇರುವ ತವರು ಮನೆಯಲ್ಲಿ ಮೂರು ಮಕ್ಕಳ ಜೊತೆ ವಾಸವಾಗಿದ್ದರು. ಗ್ರಾಮದ ಹಿರಿಯರು ರಾಜೀ ಪಂಚಾಯಿತಿ ಮಾಡಿಸಿ ಎರಡು ತಿಂಗಳ ಹಿಂದೆಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.

ಪತಿ– ಪತ್ನಿಗೆಭಾನುವಾರವೂ ಹಿರಿಯರು ಬುದ್ಧಿ ಹೇಳಿಹೋಗಿದ್ದರು. ಸೋಮವಾರ ರಾತ್ರಿ ಮತ್ತೆ ಜಗಳ ನಡೆದಿತ್ತು. ಇದರಿಂದ ಬೇಸತ್ತ ಯಲ್ಲಮ್ಮ ತನ್ನ ಮೂವರು ಮಕ್ಕಳನ್ನು ನೀರು ತುಂಬುವ ಪಾತ್ರೆಯಲ್ಲಿ ಮುಳುಗಿಸಿ ಕೊಂದು, ತಾನೂ ನೇಣಿಗೆ ಶರಣಾದರು. ಕುಡಿದ ಮತ್ತಿನಲ್ಲಿ ಮನೆಯ ಹೊರಗೆ ಮಲಗಿದ್ದ ಉಮೇಶನಿಗೆ ಪಕ್ಕದ ಮನೆಯವರೇ ವಿಷಯ ತಿಳಿಸಿದ್ದಾರೆ.

ಸಾವಿನ ಸುತ್ತ ಸಂಶಯ:

ಯಲ್ಲಮ್ಮನ ಸಾವಿನ ಸುತ್ತ ಆಯಕೆ ತವರ ಮನೆಯರು ಸಂದೇಹ ವ್ಯಕ್ತಪಡಿಸಿದ್ದಾರೆ. ಇವರದು ಚಿಕ್ಕ ಮನೆ, ಅಕ್ಕಪಕ್ಕ ಮನೆಗಳೂ ಹೊಂದಿಕೊಂಡೇ ಇವೆ. ಆದರೂ ಮಕ್ಕಳ ಅಳುವಾಗಲೀ, ಯಲ್ಲಮ್ಮನ ಚೀರಾಟವಾಗಲೀ ಯಾರಿಗೂ ಕೇಳಿಸಿಲ್ಲ. ಉಮೇಶನೇ ಕೊಲೆ ಮಾಡಿರಬಹುದು ಎಂದು ಯಲ್ಲಮ್ಮಳ ತಂದೆ ಹೇಳಿದ್ದಾರೆ.

‘ಕೌಟುಂಬಿಕ ಕಲಹ, ಪತಿಯ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲವೇ ಪತಿ ಕೊಲೆ ಮಾಡಿದ್ದಾನೆ‘ ಎಂದು ದೂರು ನೀಡಿದ್ದಾರೆ.

ಕೊನೆಯ ಮಗು ನಾಗರಾಜನ ಬಾಯಿಯಲ್ಲಿ ನೊರೆ ಬಂದಿರುವುದು ಕೂಡ ಸಾವಿನ ಕುರಿತು ಸಂಶಯ ಹುಟ್ಟುಹಾಕಿದೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.