ADVERTISEMENT

‘ಎಲ್ಲಿಲ್ಲದ ಹೆಮ್ಮೆ ನನಗೆ’

ಸಂಧ್ಯಾ ಹೆಗಡೆ
Published 7 ಮಾರ್ಚ್ 2019, 19:29 IST
Last Updated 7 ಮಾರ್ಚ್ 2019, 19:29 IST
ಅಮ್ಮನ ಜೊತೆ ಧನಂಜಯ ನಾಯ್ಕ
ಅಮ್ಮನ ಜೊತೆ ಧನಂಜಯ ನಾಯ್ಕ   

ಶಿರಸಿ: ‘ಮಗನಿಗೆ ಗಡಿಯಂಚಿಗೆ ಬರಲು ಕರೆ ಬಂದಿದೆ. ನನ್ನ ಮನದಲ್ಲಿ ಹೇಳಿಕೊಳ್ಳಲಾಗದ ತಳಮಳ. ಟಿ.ವಿ.ಯಲ್ಲಿ ಬರುವ ಸುದ್ದಿ ನೋಡಿದಾಗ ಆತಂಕ ಆವರಿಸುತ್ತದೆ. ಫೋನಿನಲ್ಲಿ ಮಕ್ಕಳ ದನಿ ಕೇಳಿದಾಗ ಅದೇನೋ ಸಮಾಧಾನ’ ಎನ್ನುವಾಗ ಅರಿವಿಲ್ಲದೇ ಜಾನಕಿ ನಾಯ್ಕ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು.

ತಾಲ್ಲೂಕಿನ ಕುಳವೆಯ ಜಾನಕಿ – ನಾರಾಯಣ ನಾಯ್ಕ ದಂಪತಿಯ ಮೂವರು ಪುತ್ರರಲ್ಲಿ, ಕಿರಿಯ ಮಗ ಧನಂಜಯ ನಾಯ್ಕ, 17 ವರ್ಷಗಳ ಹಿಂದೆ ಸೈನ್ಯ ಸೇರಿದವರು. ದೈಹಿಕ ತರಬೇತಿ ನಿರ್ದೇಶಕರಾಗಿ ಸೇರಿ, ಈಗ ಮೀರಟ್ ನಲ್ಲಿ ಹವಾಲ್ದಾರ್ ಆಗಿದ್ದಾರೆ. ಎರಡನೇ ಮಗ ಶ್ರೀನಿವಾಸ ನಾಯ್ಕ, ಸಿಆರ್‌ಪಿಎಫ್‌ನಲ್ಲಿ ಸೈನಿಕರಾಗಿ, ಪ್ರಸ್ತುತ ಹೈದರಾಬಾದ್‌ನಲ್ಲಿದ್ದಾರೆ.

‘ಬಿ.ಎ, ಬಿ.ಇಡಿ ಮಾಡಿದ್ದಶ್ರೀನಿವಾಸ ಶಿಕ್ಷಕನಾಗಬಹುದಿತ್ತು. ಸಿಆರ್‌ಪಿಎಫ್‌ ನೇಮಕಾತಿ ಪತ್ರ ಬಂದಾಗಲೇ ಆತ ಸೇನೆಗೆ ಸೇರುವ ವಿಷಯ ನಮಗೆ ತಿಳಿದಿದ್ದು. ಸಣ್ಣ ಮಗ ಸೈನ್ಯಕ್ಕೆ ಸೇರಿ ಆಗಲೇ ಎರಡು ವರ್ಷಗಳಾಗಿದ್ದವು. ಮಕ್ಕಳ ಆಸೆಗೆ ನಾವು ತಣ್ಣೀರೆರಚಲಿಲ್ಲ. ಖುಷಿಯಿಂದಲೇ ಅವರನ್ನು ಸೇವೆಗೆ ಕಳುಹಿಸಿಕೊಟ್ಟೆವು’.

ADVERTISEMENT

‘2014ರಲ್ಲಿ ಛತ್ತೀಸಗಡದ ಗಡ್ಚಿರೋಲಿಯಲ್ಲಿ ಬಾಂಬ್ ಸ್ಫೋಟಗೊಂಡು 12 ಯೋಧರು ಹುತಾತ್ಮರಾಗಿದ್ದರು. ಸ್ಫೋಟಗೊಂಡ ಬಸ್ ಹತ್ತಿದ್ದ ಶ್ರೀನಿವಾಸ ಅದ್ಯಾವುದೋ ಕಾರಣಕ್ಕೆ ಇಳಿದು, ಹಿಂದಿನ ಬಸ್ ಹತ್ತಿದ್ದನಂತೆ. ಕಣ್ಣೆದುರೇ ಗಾಯಗೊಂಡವರಿಗೆ, ದೂರ ಓಡಿಹೋಗಿ ನೀರು ತಂದು ಕುಡಿಸಿದನಂತೆ. ಅಂದು ರಾತ್ರಿ ಕಾಲ್ ಮಾಡಿದ ಮಗ ನಾನು ಸುರಕ್ಷಿತವಾಗಿದ್ದೇನೆ. ದೇವರ ಮುಂದೊಂದು ತುಪ್ಪದ ದೀಪ ಹಚ್ಚಿಬಿಡಿ ಎಂದಾಗಲೇ ವಿಷಯ ತಿಳಿದದ್ದು. ನಾನು ನಿಟ್ಟುಸಿರು ಬಿಟ್ಟೆ. ಧನಂಜಯ ಸುಮಾರು, 50 ಸಾವಿರ ಸೈನಿಕರಿಗೆ ದೈಹಿಕ ಶಿಕ್ಷಣ ತರಬೇತಿ ನೀಡಿದ್ದಾನೆ. ಮಕ್ಕಳ ಬಗ್ಗೆ ಎಲ್ಲಿಲ್ಲದ ಹೆಮ್ಮೆ ನನಗೆ’ ಎಂದ ಜಾನಕಿ ಅವರದ್ದು ತೃಪ್ತಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.