ಆರ್. ಅಶೋಕ
ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದಿರುವ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ಪಡೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ₹2 ಸಾವಿರ ನೀಡುವ ಬದಲು, ಬಾಣಂತಿಯರ ಬದುಕಿಗೆ ‘ಗ್ಯಾರಂಟಿ’ ನೀಡಬೇಕು. ಬಡ ಮಹಿಳೆಯರ ಜೀವ ಉಳಿಸಬೇಕು ಎಂದರು.
ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ನಿಂತಿಲ್ಲ. ಇದುವರೆಗೆ 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಕೊಲೆ, ಸರ್ಕಾರವೇ ನೇರ ಹೊಣೆ. ಹುಬ್ಬಳ್ಳಿಯಲ್ಲಿ ಬಾಣಂತಿ ಸತ್ತಿದ್ದಕ್ಕೆ ಅವರ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಿಪಟೂರಿನಲ್ಲೂ ಒಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಕಾಂಗ್ರೆಸ್ ಬೆಳಗಾವಿ ಶತಮಾನೋತ್ಸವ ಸಮಾವೇಶ ನಡೆಸುವಾಗಲೇ ಬಾಣಂತಿಯರು ಮೃತಪಟ್ಟಿದ್ದಾರೆ. ಆದರೆ, ದೊಡ್ಡದೊಡ್ಡ ಕಟೌಟ್ ಹಾಕಿಸಿಕೊಂಡು ಬೀಗುತ್ತಿದ್ದ ಹಿರಿಯ ನಾಯಕರು ಅವರ ಮನೆಗಳಿಗೆ ಭೇಟಿ ನೀಡಲಿಲ್ಲ ಎಂದು ದೂರಿದರು.
ಸರ್ಕಾರ ಎಲ್ಲವನ್ನೂ ಸರಿಯಾಗಿ ನಿಭಾಯಿಸಿದೆ ಎಂದು ಆರೋಗ್ಯ ಸಚಿವರು ಸದನದಲ್ಲೇ ಸ್ಪಷ್ಟನೆ ನೀಡಿದ್ದರು. ಆದರೆ, ಔಷಧ ಕಂಪನಿಗಳು ಪೂರೈಸಿದ ಔಷಧದ ವಿಚಾರದಲ್ಲಿ ಔಷಧ ನಿಯಂತ್ರಕರು ಮಾಡಿರುವ ತಪ್ಪುಗಳ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೋಟಿಸ್ ನೀಡಿದ್ದಾರೆ. ಆಸ್ಪತ್ರೆಗಳಿಗೆ ಪೂರೈಕೆಯಾದ 462 ಔಷಧಗಳು ಕಳಪೆ ಎಂದು ಸರ್ಕಾರವೇ ಹೇಳಿದೆ. ಇದು ಸರ್ಕಾರದ ದ್ವಿಮುಖ ನೀತಿಗೆ ಹಿಡಿದ ಕನ್ನಡಿ ಎಂದರು.
ಪ್ರಿಯಾಂಕ್ ವಿರುದ್ಧ ನಾಳೆ ಹೋರಾಟ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಜ. 4ರಂದು ಬಿಜೆಪಿ ಹೋರಾಟ ನಡೆಸಲಿದೆ ಎಂದು ಅಶೋಕ ತಿಳಿಸಿದರು.
ಪ್ರಿಯಾಂಕ್ ಖರ್ಗೆ ಹೆಸರು ಮೃತ ಸಚಿನ್ ಅವರ ಮರಣಪತ್ರದಲ್ಲಿದೆ. ಸಚಿವರ ಆಪ್ತನೇ ಈ ಘಟನೆಗೆ ಕಾರಣ. ಆದರೆ, ಎಐಸಿಸಿ ಅಧ್ಯಕ್ಷರ ಮಗನಾಗಿರುವ ಒಂದೇ ಕಾರಣಕ್ಕೆ ಅವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ. ಹೆದರಿ ನಡುಗುತ್ತಿದ್ದಾರೆ ಎಂದರು.
‘ದೆಹಲಿಯಿಂದ ಒತ್ತಡ’
‘ಪ್ರಿಯಾಂಕ್ ಖರ್ಗೆ ಪರ ಮಾತನಾಡುವಂತೆ ಕಾಂಗ್ರೆಸ್ ನಾಯಕರಿಗೆ ದೆಹಲಿಯಿಂದ ಒತ್ತಡ ಬರುತ್ತಿದೆ. ಮೂವರಿಗೆ ಕರೆ ಬರುತ್ತಿದ್ದು, ಮೂವರು ಮಾತ್ರವೇ ಮಾತನಾಡುತ್ತಿ ದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ‘ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಮುಂದೆ ಬರಬೇಕಿರುವ ಕಾರಣ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವರಾಗಿರುವ ಕಾರಣಕ್ಕೆ ಜಿ.ಪರಮೇಶ್ವರ ಮಾತನಾಡುತ್ತಿ ದ್ದಾರೆ. ಆದರೆ ಒತ್ತಡಕ್ಕೆ ಬಗ್ಗದೆ ಪ್ರಿಯಾಂಕ್ ಅವರ ರಾಜೀನಾಮೆ ಪಡೆಯಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.