ADVERTISEMENT

ನೋಂದಣಿ ಫಲಕದಲ್ಲಿ ಬರಹ: ಶಾಸಕರ ಕಾರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 15:58 IST
Last Updated 7 ಏಪ್ರಿಲ್ 2022, 15:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಾರೆಡ್ಡಿ ಅವರ ಕಾರಿನ ನೋಂದಣಿ ಫಲಕದ ಮೇಲೆ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘಿಸಿ, ‘ಶಾಸಕರು, ಚಿಂತಾಮಣಿ ವಿಧಾನಸಭಾ ಕ್ಷೇತ್ರ’ ಎಂದು ಬರೆಸಿರುವುದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಗುರುವಾರ ನೋಟಿಸ್‌ ಜಾರಿ ಮಾಡಿದ್ದಾರೆ.

ಗುರುವಾರ ಮಧ್ಯಾಹ್ನ ವಿಧಾನಸೌಧದ ಸಮೀಪ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಕೃಷ್ಣಾ ರೆಡ್ಡಿ ಅವರ ಕೆಎ–53 ಎಂಎಫ್‌–4569 ಸಂಖ್ಯೆಯ ಇನ್ನೋವಾ ಕ್ರಿಸ್ಟಾ ಕಾರು ಆ ಮಾರ್ಗವಾಗಿ ಬಂತು. ಕಾರಿನಲ್ಲಿ ಚಾಲಕ ಮಾತ್ರ ಇದ್ದರು. ತಪಾಸಣೆಗೆ ನಿಲ್ಲಿಸದೇ ವಿಧಾನಸೌಧದೊಳಕ್ಕೆ ಬಂದರು.

ಬೆನ್ನಟ್ಟಿ ವಿಧಾನಸೌಧದ ಒಳಗೆ ಬಂದ ಸಾರಿಗೆ ಇಲಾಖೆ ಅಧಿಕಾರಿಗಳು, ಕಾರನ್ನು ತಡೆದು ನಿಲ್ಲಿಸಿದರು. ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ಚಾಲನಾ ಪರವಾನಗಿಯನ್ನು ಚಾಲಕ ಹಾಜರುಪಡಿಸಿದರು. ಕಾರಿನ ಮುಂದಿನ ಮತ್ತು ಹಿಂದಿನ ನೋಂದಣಿ ಫಲಕಗಳ ಮೇಲೆ ‘ಶಾಸಕರು ಚಿಂತಾಮಣಿ ವಿಧಾನಸಭಾ ಕ್ಷೇತ್ರ’ ಎಂದು ಬರೆದಿರುವುದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ನೋಟಿಸ್‌ ನೀಡಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷ್ಣಾ ರೆಡ್ಡಿ, ‘ಕಾರು ನನ್ನದೇ. ಮಗಳು ವಕೀಲರಾಗಿದ್ದು, ಅವರನ್ನು ಹೈಕೋರ್ಟ್‌ ಬಿಟ್ಟು ಚಾಲಕ ಶಾಸಕರ ಭವನಕ್ಕೆ ಬರುತ್ತಿದ್ದರು. ಯಾವ ಕಾರಣಕ್ಕಾಗಿ ನೋಟಿಸ್‌ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪರಿಶೀಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.