ADVERTISEMENT

ರಾಹುಲ್ ಹೋದಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ತೋರಿಸಲಿ: ಸಂಸದ ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 9:34 IST
Last Updated 30 ಸೆಪ್ಟೆಂಬರ್ 2022, 9:34 IST
 ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ   

ಮೈಸೂರು: ‘ರಾಹುಲ್ ಗಾಂಧಿ ಪ್ರಚಾರ ಮಾಡಿದ್ದರಿಂದ ಯಾವ ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದಿದೆ ಎನ್ನುವ ಉದಾಹರಣೆ ಇದ್ದರೆ ತೋರಿಸಲಿ. ಆಗ, ಅವರು ಕರ್ನಾಟಕದಲ್ಲಿ ಭಾರತ್ ಜೋಡೊ ಯಾತ್ರೆ ನಡೆಸಿದ್ದರಿಂದ ಆ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗುತ್ತದೆ ಎಂಬುದನ್ನು ನಾವೂ ಒಪ್ಪುತ್ತೇವೆ’ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಭಾರತ ಜೋಡಿಸುವುದನ್ನು ಬಿಜೆಪಿಯರನ್ನು ನೋಡಿ ಕಲಿಯಲಿ’ ಎಂದು ಸಲಹೆ ನೀಡಿದರು.

‘ಜೋಡಿಸುವುದು ಪಾದಯಾತ್ರೆಯಿಂದ ಆಗುವುದಿಲ್ಲ. ಅಭಿವೃದ್ಧಿಯಿಂದ ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಯಾತ್ರೆ ನಡೆಸುವ ಮಾರ್ಗದುದ್ದಕ್ಕೂ ಬಿಜೆಪಿ ಸರ್ಕಾರದಿಂದ ಮಾಡಿರುವ ಪ್ರಗತಿಯನ್ನು ನೋಡಿ ಆ ಪಕ್ಷದವರು ಕಲಿಯಲಿ. ದೇಶವನ್ನು ಒಡೆಯುವವರ ಸಹವಾಸವನ್ನು ಬಿಡಲಿ’ ಎಂದರು.

ADVERTISEMENT

‘ರಾಹುಲ್ ಗಾಂಧಿ ಇಲ್ಲಾದರೂ, ದೇಶ ವಿರೋಧಿ ಪಾಸ್ಟರ್ ಬದಲಿಗೆ ನಂಜುಂಡೇಶ್ವರ ದೇವಸ್ಥಾನಕ್ಕೋ, ಚಾಮುಂಡೇಶ್ವರಿ ದೇಗುಲಕ್ಕೋ ಹೋಗಲಿ. ಹೆದ್ದಾರಿಗಳ ನಿರ್ಮಾಣ, ವಿಮಾನನಿಲ್ದಾಣಗಳ ಸುಧಾರಣೆ, ಕೆರೆಗಳಿಗೆ ನೀರು ತುಂಬಿಸುವುದು ಮೊದಲಾದವುಗಳ ಮೂಲಕ ನರೇಂದ್ರ ಮೋದಿ ಸರ್ಕಾರವು ಭಾರತವನ್ನು ಹೇಗೆ ಜೋಡಿಸಿದೆ ಎಂಬುದನ್ನು ವೀಕ್ಷಿಸಲಿ’ ಎಂದು ಹೇಳಿದರು.

‘ದೇಶದಲ್ಲಿ ಕಾಂಗ್ರೆಸ್‌ಗೆ ಇನ್ನೂ 25 ವರ್ಷ ಭವಿಷ್ಯವಿಲ್ಲ. ಅಲ್ಲಿಯವರೆಗೆ ಬಿಜೆಪಿಯೇ ಅಧಿಕಾರದಲ್ಲಿ ಇರುತ್ತದೆ. ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯನ್ನು ಕಾಂಗ್ರೆಸ್‌ನವರು ಬಿಡಲಿ’ ಎಂದರು.

‘ಯಾತ್ರೆ ಆರಂಭದಲ್ಲೇ ರಾಹುಲ್, ಜೀಸಸ್ ಒಬ್ಬನೇ ದೇವರು ಎನ್ನುವ ಪಾಸ್ಟರ್‌ ಒಬ್ಬನನ್ನು ಕೇರಳದಲ್ಲಿ ಭೇಟಿಯಾದರು. ಇದರೊಂದಿಗೆ ತಮ್ಮ ಉದ್ದೇಶವೇನು ಎನ್ನುವುದನ್ನೂ ಸ್ಪಷ್ಟಪಡಿಸಿದರು. ಹಾಗಾಗಿ ಅವರದ್ದು ಜೋಡಿಸುವ ಯಾತ್ರೆ ಅಲ್ಲ; ಒಡೆಯುವ ಯಾತ್ರೆಯಷ್ಟೆ’ ಎಂದು ಆರೋಪಿಸಿದರು.

‘ಆರ್‌ಎಸ್‌ಎಸ್‌ ಬಿಜೆಪಿಯ ಪಾಪದ ಕೂಸು’ ಎಂಬ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ, ‘ಅವರು ರಾಜಕೀಯ ಜೀವನದಲ್ಲಿ 40 ವರ್ಷಗಳವರೆಗೆ ನೆಹರೂ ದೇಶ ವಿಭಜಕ ಎನ್ನುತ್ತಿದ್ದರು. ಇಂದಿರಾ ಗಾಂಧಿ ಅವರನ್ನು ಪ್ರಜಾಪ್ರಭುತ್ವದ ಕೊಲೆಗಾರ್ತಿ ಎಂದಿದ್ದರು. 15 ವರ್ಷಗಳಿಂದೀಚೆಗೆ ಸೋನಿಯಾ ಗಾಂಧಿಯನ್ನು ಅಧಿನಾಯಕಿ, ರಾಹುಲ್‌ನನ್ನು ರಾಜಕುಮಾರ ಎನ್ನುತ್ತಿದ್ದಾರೆ. ಯಾವುದರ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇಲ್ಲ. ಆಧಾರ್, ಪ್ಯಾನ್ ಲಿಂಕ್ ಬಗ್ಗೆ ತಿಳಿದಿಲ್ಲದ, ಸ್ಮಾರ್ಟ್ ಮೊಬೈಲ್ ಫೋನ್‌ ಬಳಸಲು ಗೊತ್ತಿಲ್ಲದ ಅವರ‍್ಯಾವ ಸೀಮೆಯ ಅರ್ಥಶಾಸ್ತ್ರಜ್ಞ?’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.