ಬೆಂಗಳೂರು: ‘ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಪರ ಮಾತನಾಡುವುದು ಮತ್ತು ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವುದು ಪಕ್ಷ ವಿರೋಧ ಚಟುವಟಿಕೆಯಾ? ಇವರಿಬ್ಬರನ್ನು ಟೀಕೆ ಮಾಡಿದ್ದರೆ ಒಳ್ಳೆಯವನಾಗುತ್ತಿದ್ದೆನಾ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದರು.
ಪಕ್ಷದ ಶಿಸ್ತು ಸಮಿತಿ ತಮಗೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ನೋಟಿಸ್ ನೀಡಿದ್ದಕ್ಕೆ ಭಯವಿಲ್ಲ ಹೆದರುವುದೂ ಇಲ್ಲ. ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಆದರೂ ನನಗೆ ನೋಟಿಸ್ ನೀಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೇಂದ್ರ ಶಿಸ್ತುಪಾಲನಾ ಸಮಿತಿ ನೀಡಿರುವ ಶೋಕಾಸ್ ನೋಟಿಸ್‌ನ ಹಿಂದೆ ಮಹಾ ನಾಯಕರೊಬ್ಬರ ಕೈವಾಡವಿದೆ. ಅವರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಹಿಂದೆ ಪ್ರಲ್ಹಾದ ಜೋಶಿ ಮತ್ತು ನಳಿನ್‌ಕುಮಾರ್ ಕಟೀಲ್ ಅವರು ಅಧ್ಯಕ್ಷರಾಗಿದ್ದಾಗ ಯಾವುದೇ ಟೀಕೆಗಳು ಕೇಳಿ ಬಂದಿರಲಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಮಾತ್ರ ಏಕೆ ಟೀಕಿಸಲಾಗುತ್ತಿದೆ’ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
‘ನೋಟಿಸ್ ಬಂದ ವಿಚಾರ ಗೊತ್ತಾಗುತ್ತಿದ್ದ ಹಾಗೆ ಕಾರ್ಯಕರ್ತರು ಶಾಸಕರು ಮಾಜಿ ಶಾಸಕರು ಮತ್ತು ವೀರಶೈವ ಮುಖಂಡರು ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಕಳೆದ ಐದಾರು ವರ್ಷಗಳಿಂದ ಪಕ್ಷದಲ್ಲಿನ ಗೊಂದಲಗಳು ಮತ್ತು ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಬರೆದು ಎಲ್ಲ ವಿವರಗಳನ್ನು ತಿಳಿಸುತ್ತೇನೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.