ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) 2025–26ರ ಅರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹272 ಕೋಟಿ ನಷ್ಟ ಅನುಭವಿಸಿದೆ.
ಕಂಪನಿಯ ಕ್ರೋಢೀಕೃತ ಆರ್ಥಿಕ ಫಲಿತಾಂಶಕ್ಕೆ ನಿರ್ದೇಶಕ ಮಂಡಳಿ ಶುಕ್ರವಾರ ಅನುಮೋದನೆ ನೀಡಿದೆ. ಈ ಅವಧಿಯಲ್ಲಿ ₹20,988 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ₹ 27,289 ಕೋಟಿ ಆದಾಯ ಗಳಿಸಿತ್ತು. ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ ಕಂಪನಿ ₹ 66 ಕೋಟಿ ಲಾಭ ಗಳಿಸಿತ್ತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಆರ್ಥಿಕ ವರ್ಷದ ಮೊದಲ ಅವಧಿಯಲ್ಲಿ ಕಚ್ಚಾ ತೈಲ ಸಂಸ್ಕರಣೆಯ ಒಟ್ಟು ಗುರಿ (ಜಿಆರ್‌ಎಂ) ಬ್ಯಾರೆಲ್ ಒಂದಕ್ಕೆ 3.88 ಡಾಲರ್‌ಗೆ ತಲುಪಿದೆ. ಕಳೆದ ಬಾರಿ ಈ ಪ್ರಮಾಣ 4.70 ಡಾಲರ್ ಆಗಿತ್ತು. ಕಳೆದ ಬಾರಿ ಮೊದಲ ಅವಧಿಯಲ್ಲಿ 4.35 ಮಿಲಿಯ ಟನ್ ಕಚ್ಚಾತೈಲ ಸಂಸ್ಕರಣೆ ಮಾಡಿದ್ದರೆ ಈ ಬಾರಿ 3.53 ಮಿಲಿಯ ಟನ್ ಮಾತ್ರ ಸಂಸ್ಕರಿಸಲಾಗಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಎಂಆರ್‌ಪಿಎಲ್ ದಾಖಲೆಯ 1,512 ಸಾವಿರ ಟನ್ (ಟಿಎಂಟಿ) ಕಚ್ಛಾತೈಲವನ್ನು ಸಂಸ್ಕರಿಸಿದೆ. ಈ ಹಿಂದಿನ ಗರಿಷ್ಠ ಪ್ರಮಾಣದ ಸಂಸ್ಕರಣೆ 2022ರ ಏಪ್ರಿಲ್‌ನಲ್ಲಿ ಮಾಡಲಾಗಿತ್ತು. ಆಗ 1,481 ಟಿಎಂಟಿ ಸಂಸ್ಕರಣೆ ಆಗಿತ್ತು. ಕಂಪನಿ ಒಂದನೇ ಹಂತದ ಪ್ರಮುಖ ಘಟಕಗಳನ್ನು ಮುಚ್ಚುವ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.