ADVERTISEMENT

ಸರ್ಕಾರಿ ನೌಕರರಿಗೆ ‘ಸೂಪರ್‌ ಮಾರ್ಕೆಟ್‌’: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಸೂಚನೆ

ಪೊಲೀಸ್‌, ಸೇನಾ ಕ್ಯಾಂಟೀನ್‌ ಮಾದರಿಯ ಮಳಿಗೆ: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಎಂಎಸ್‌ಐಎಲ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 16:01 IST
Last Updated 15 ಅಕ್ಟೋಬರ್ 2025, 16:01 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ಪೊಲೀಸ್‌ ಮತ್ತು ಸೇನಾ ಕ್ಯಾಂಟೀನ್‌ ಮಾದರಿಯಲ್ಲೇ ರಾಜ್ಯ ಸರ್ಕಾರದ ನೌಕರರಿಗೂ ಎಂಎಸ್‌ಐಎಲ್‌ ವತಿಯಿಂದ ಸೂಪರ್‌ ಮಾರ್ಕೆಟ್‌ ಆರಂಭಿಸುವ ಚಿಂತನೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ (ಎಂಎಸ್‌ಐಎಲ್‌) ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ಅವರ ಜತೆ ಎಂ.ಬಿ. ಪಾಟೀಲ ಅವರು ಬುಧವಾರ ಸಭೆ ನಡೆಸಿದರು.

ಬಳಿಕ ಮಾಹಿತಿ ನೀಡಿದ ಅವರು, ‘ಪೊಲೀಸ್‌ ಮತ್ತು ಸೇನಾ ಕ್ಯಾಂಟೀನ್‌ನಲ್ಲಿ ರಿಯಾಯಿತಿ ದರದಲ್ಲಿ ದಿನಸಿ, ಗೃಹಬಳಕೆ ವಸ್ತುಗಳು ದೊರೆಯುತ್ತವೆ. ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ನೌಕರರು ಇದ್ದು, ಅವರಿಗೂ ರಿಯಾಯಿತಿ ದರದಲ್ಲಿ ದಿನಸಿ ಮತ್ತಿತರ ವಸ್ತುಗಳನ್ನು ಒದಗಿಸುವ ಸೂಪರ್‌ಮಾರ್ಕೆಟ್ ಆರಂಭಿಸುವ ಬಗ್ಗೆ ಪ್ರಾಥಮಿಕ ಸಭೆಯನ್ನು ನಡೆಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ದಿನಸಿ ಮತ್ತಿತರ ವಸ್ತುಗಳನ್ನು ರಿಯಾಯಿತಿ ಅಥವಾ ಸಹಾಯಧನ ಸಹಿತ ದರದಲ್ಲಿ ಒದಗಿಸುವ ಸಾಧ್ಯತೆಗಳು ಹಾಗೂ ಅದರ ಆರ್ಥಿಕ ಪರಿಣಾಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸಿ ಎಂದು ಎಂಎಸ್‌ಐಎಲ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ, ಬೆಂಗಳೂರಿನಲ್ಲಿ 4–5 ಮಳಿಗೆಗಳನ್ನು ಆರಂಭಿಸುವ ಯೋಚನೆ ಇದೆ. ನಂತರದ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಇಂತಹ ಮಳಿಗೆಗಳನ್ನು ವಿಸ್ತರಿಸಲು ಅವಕಾಶವಿರಲಿದೆ. ಕಾರ್ಯಸಾಧ್ಯತಾ ವರದಿ ಬಂದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಎಂಎಸ್‌ಐಎಲ್‌ಗೂ ಅನುಕೂಲ: ‘ಈ ಯೋಜನೆ ಕಾರ್ಯಾರಂಭ ಮಾಡಿದರೆ, ಎಂಎಸ್‌ಐಎಲ್‌ಗೂ ಅನುಕೂಲವಾಗಲಿದೆ. ಈಗ ಎಂಎಸ್‌ಐಎಲ್‌ನ ಚಟುವಟಿಕೆಗಳು ಸೀಮಿತವಾಗಿವೆ. ಅದಕ್ಕೆ ಮತ್ತಷ್ಟು ಕಸುವು ತುಂಬಿ, ಆರ್ಥಿಕವಾಗಿ ಸದೃಢಗೊಳಿಸಬೇಕು ಎಂಬ ಆಲೋಚನೆ ನಮ್ಮದು. ಈ ಯೋಜನೆಯಿಂದ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗಲಿವೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

ಎಂಎಸ್‌ಐಎಲ್‌ ಲೋಗೊ

ಪರಿಶೀಲನಾ ಹಂತದಲ್ಲಿ ಯೋಜನೆ

* ದಿನಬಳಕೆ ವಸ್ತುಗಳು ದಿನಸಿಯನ್ನು ರಿಯಾಯಿತಿ ದರ ಅಥವಾ ಸಹಾಯಧನ ಸಹಿತ ದರದಲ್ಲಿ ಮಾರಾಟ ಮಾಡಲು ಚಿಂತನೆ

* ರಾಜ್ಯ ಸರ್ಕಾರದ ಆರು ಲಕ್ಷ ನೌಕರರು ಕುಟುಂಬದ ಸದಸ್ಯರು ಸೂಪರ್‌ಮಾರ್ಕೆಟ್‌ನಲ್ಲಿ ಖರೀದಿಸಲು ಅವಕಾಶ * ನಿಗಮ ಮಂಡಳಿಗಳ ನೌಕರರು ಸರ್ಕಾರದ ಎಲ್ಲ ಇಲಾಖೆ/ಪ್ರಾಧಿಕಾರಗಳ ಗುತ್ತಿಗೆ ನೌಕರರಿಗೂ ಖರೀದಿಗೆ ಅವಕಾಶ

* ರಾಜ್ಯ ಸರ್ಕಾರದ ನಿವೃತ್ತ ನೌಕರರು ಮತ್ತು ಕುಟುಂಬದವರಿಗೂ ಈ ಸೇವೆ ವಿಸ್ತರಿಸುವ ಬಗ್ಗೆ ಪರಿಶೀಲಿಸಲು ಸೂಚನೆ * ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಮಳಿಗೆಗಳ ಆರಂಭಕ್ಕೆ ಯೋಜನೆ. ನಂತರದ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲು ಅವಕಾಶ

‘ಲಾಭಾಂಶ ಕಡಿಮೆ ಇರಿಸಿ ಮಾರಾಟ’

‘ರಾಜ್ಯ ಪೊಲೀಸ್‌ ಇಲಾಖೆಯು ತನ್ನ ಸಿಬ್ಬಂದಿಗಾಗಿ ‘ಪೊಲೀಸ್ ಕ್ಯಾಂಟೀನ್‌’ ನಡೆಸುತ್ತಿದೆ. ಪೊಲೀಸ್‌ ಸಿಬ್ಬಂದಿಯು ತಮ್ಮ ತಿಂಗಳ ದಿನಸಿಯನ್ನು ಈ ಕ್ಯಾಂಟೀನ್‌ಗಳಲ್ಲಿ ಸಹಾಯಧನ ಸಹಿತ ದರದಲ್ಲಿ ಖರೀದಿಸಬಹುದಾಗಿದೆ.

ಲಾಭಾಂಶವನ್ನು ಕಡಿಮೆ ಇರಿಸಿಕೊಂಡು ಈ ಕ್ಯಾಂಟೀನ್‌ಗಳು ವಹಿವಾಟು ನಡೆಸುತ್ತಿವೆ. ಇದೇ ಮಾದರಿಯಲ್ಲಿ ಎಂಎಸ್‌ಐಎಲ್‌ ಸೂಪರ್‌ ಮಾರ್ಕೆಟ್‌ಗಳನ್ನು ರೂಪಿಸಬಹುದಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈಗ ಎಂಎಸ್‌ಐಎಲ್‌ ಪುಸ್ತಕ ಮತ್ತಿತರ ವಸ್ತುಗಳನ್ನು ಅತ್ಯಂತ ಕಡಿಮೆ ಶೇ 3.50ರಷ್ಟು ಲಾಭಾಂಶ ಇರಿಸಿಕೊಂಡು ವಹಿವಾಟು ನಡೆಸುತ್ತಿದೆ. ವ್ಯಾಪಾರಿಗಳು ಇತರ ಸೂಪರ್‌ ಮಾರ್ಕೆಟ್‌ಗಳು ಶೇ 30ರಿಂದ ಶೇ 40ರಷ್ಟು ಲಾಭಾಂಶ ಇರಿಸಿಕೊಂಡಿರುತ್ತವೆ’ ಎಂದು ವಿವರಿಸಿದರು. ‘ಜತೆಗೆ ಪೂರೈಕೆದಾರರೂ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಪೂರೈಸುವಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಒತ್ತು ನೀಡಲಾಗುತ್ತದೆ’ ಎಂದರು.

ತುಟ್ಟಿಭತ್ಯೆ ಶೇ 2ರಷ್ಟು ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಶೇ 2ರಷ್ಟು ಹೆಚ್ಚಳ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ನೌಕರರು ಈಗ ತಮ್ಮ ಮೂಲ ವೇತನದ ಶೇ 12.25ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದು ಹೊಸ ಆದೇಶದಿಂದಾಗಿ ಒಟ್ಟು ತುಟ್ಟಿಭತ್ಯೆ ಪ್ರಮಾಣ ಶೇ 14.25ಕ್ಕೆ ಏರಿಕೆಯಾಗಲಿದೆ. ಈ ಆದೇಶ ನಿವೃತ್ತ ಸರ್ಕಾರಿ ನೌಕರರು ಅವಲಂಬಿತ ಪಿಂಚಣಿದಾರರು ಜಿಲ್ಲಾ ಪಂಚಾಯಿತಿ ಪೂರ್ಣಾವಧಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ನಿವೃತ್ತ ವೇತನದಾರಿಗೂ ಈ ನಿಯಮ ಅನ್ವಯವಾಗಲಿದೆ. ಯುಜಿಸಿ ವೇತನಶ್ರೇಣಿ ಪಡೆಯುವ ನೌಕರರು ಎನ್‌ಜಿಪಿಸಿ ವೇತನ ಶ್ರೇಣಿ ಪಡೆಯುವ ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಈ ಆದೇಶ ಅನ್ವಯ ಆಗುವುದಿಲ್ಲ.

‘ಶೇ 2ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ರಾಜ್ಯದ ಸುಮಾರು 5.25 ಲಕ್ಷ ಸರ್ಕಾರಿ ನೌಕರರು ನಿಗಮ ಮಂಡಳಿ ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ 4.50 ಲಕ್ಷ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ’ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.