ADVERTISEMENT

ಮುಡಾ ಆಯುಕ್ತರಾಗಿದ್ದ ನಟೇಶ್‌ಗೆ ಪದೋನ್ನತಿಗೆ ‘ಅವಸರ‘:ಪ್ರಧಾನಿ ಸಚಿವಾಲಯಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 12:32 IST
Last Updated 14 ಜನವರಿ 2026, 12:32 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ‘ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರಿಗೆ 2005ರಿಂದಲೇ ಪೂರ್ವಾನ್ವಯವಾಗುವಂತೆ ನಿಯಮಬಾಹಿರವಾಗಿ ಉಪವಿಭಾಗಾಧಿಕಾರಿ (ಎ.ಸಿ.) ಹುದ್ದೆಗೆ ಪದೋನ್ನತಿ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ‘ ಎಂದು ಆರೋಪಿಸಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿ ಹಾಗೂ ಪ್ರಧಾನಿ ಸಚಿವಾಲಯದ ಕಾರ್ಯದರ್ಶಿಗೆ ಕರ್ನಾಟಕ ರಾಷ್ಟ್ರ ಸಮಿತಿ ದಾಖಲೆಗಳ ಸಮೇತ ದೂರು ನೀಡಿದೆ. 

ADVERTISEMENT

‘ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಯಾದ ನಟೇಶ್ ಅವರ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳಿವೆ. ಸಚಿವ ಸಂಪುಟ ನಿರ್ಣಯದ ಮೂಲಕ ಬಡ್ತಿ ನೀಡಲು ಮುಂದಾಗಿರುವುದು ಅಕ್ರಮ. ಒಂದು ವೇಳೆ, ಎ.ಸಿ. ಹುದ್ದೆಗೆ ಪದೋನ್ನತಿ ಹೊಂದಿದರೆ ಅವರು ಐಎಎಸ್‌ ಹುದ್ದೆಗೆ ಅರ್ಹರು ಆಗುತ್ತಾರೆ. ಈ ನಿಯಮಬಾಹಿರ ಕ್ರಮವನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು‘ ಎಂದು ಸಮಿತಿಯು ದೂರಿನಲ್ಲಿ ಕೋರಿದೆ. 

ಪ್ರಕರಣವೇನು?:

2005ರಲ್ಲಿ ನಡೆದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಗೆ ನಟೇಶ್ ಅವರು 3ಬಿ–ಗ್ರಾಮೀಣ–ಕೆಎಂಎಸ್‌ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದರು. ಕೆಪಿಎಸ್‌ಸಿ 2006ರ ಮಾರ್ಚ್‌ನಲ್ಲಿ ನಡೆಸಿದ್ದ ಸಂದರ್ಶನದ ಸಂದರ್ಭದಲ್ಲಿ ವಿದ್ಯಾಭ್ಯಾಸದ ಪ್ರಮಾಣಪತ್ರಗಳ ಮೂಲಪ್ರತಿಗಳನ್ನು ಹಾಜರುಪಡಿಸಿದ್ದರು. ಆದರೆ, ಮೀಸಲಾತಿ ಪ್ರಮಾಣಪತ್ರಗಳನ್ನು ನೀಡಿರಲಿಲ್ಲ. ಬಸ್‌ನಲ್ಲಿ ಬರುವಾಗ ಕಳೆದುಹೋಗಿದೆ ಎಂದು ಕಾರಣ ನೀಡಿದ್ದರು. 

ಆಯೋಗವು ನಟೇಶ್‌ ಅವರನ್ನು ಸಾಮಾನ್ಯ ವಿಭಾಗಕ್ಕೆ ಪರಿಗಣಿಸಿ ತಹಶೀಲ್ದಾರ್‌ ಹುದ್ದೆಗೆ ಆಯ್ಕೆ ಮಾಡಿತ್ತು. 3ಬಿ–ಗ್ರಾಮೀಣ–ಕೆಎಂಎಸ್‌ ಮೀಸಲಾತಿ ಅಡಿ ತನ್ನನ್ನು ಪರಿಗಣಿಸಿ ಉಪವಿಭಾಗಾಧಿಕಾರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿ ನಟೇಶ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ಕೆಪಿಎಸ್‌ಸಿ ನಿರ್ಣಯ ಸರಿ ಇದೆ ಎಂದು 2012ರ ಜನವರಿಯಲ್ಲಿ ಆದೇಶ ನೀಡಿದ್ದ ನ್ಯಾಯಮಂಡಳಿಯು ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮಂಡಳಿ ಆದೇಶವನ್ನು ಹೈಕೋರ್ಟ್‌ 2012ರ ಅಕ್ಟೋಬರ್‌ನಲ್ಲಿ ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶದ ವಿರುದ್ಧ ನಟೇಶ್ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ 2014ರಲ್ಲಿ ವಜಾಗೊಳಿಸಿತ್ತು. 

‘ನಟೇಶ್ ಅವರು ಮುಡಾ ಆಯುಕ್ತರಾಗಿದ್ದ ಸಂದರ್ಭದಲ್ಲಿ ನೂರಾರು ಕೋಟಿಗಳ ಅಕ್ರಮ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಫಲಾನುಭವಿ ಆಗಿತ್ತು. ಆ ಬಳಿಕ ಮುಖ್ಯಮಂತ್ರಿ ಕುಟುಂಬವು 14 ನಿವೇಶನಗಳನ್ನು ಹಿಂತಿರುಗಿಸಿತ್ತು. ಇಷ್ಟೆಲ್ಲ ಅಕ್ರಮಗಳಲ್ಲಿ ಪ್ರಮುಖ ಪಾತ್ರಧಾರಿಯಾದ ಅಧಿಕಾರಿಗೆ ಪೂರ್ವಾನ್ವಯವಾಗುವಂತೆ ಬಡ್ತಿ ನೀಡುವ ಮೂಲಕ ಮುಖ್ಯಮಂತ್ರಿ ಅವರು ಋಣಸಂದಾಯ ಮಾಡಲು ಮುಂದಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ‘ ಎಂದು ಪಕ್ಷವು ದೂರಿನಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.