ADVERTISEMENT

CM ವಿರುದ್ಧ ತನಿಖೆಗೆ ಅನುಮತಿ; ರಾಜ್ಯಪಾಲರಿಂದ ಸಂವಿಧಾನ ಹತ್ಯೆ ಯತ್ನ: ತಂಗಡಗಿ ಗರಂ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 7:45 IST
Last Updated 17 ಆಗಸ್ಟ್ 2024, 7:45 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಕೊಪ್ಪಳ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ತಾವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಈ ಮೂಲಕ ಸಂವಿಧಾನ ಹತ್ಯೆ ಯತ್ನಕ್ಕೆ ರಾಜ್ಯಪಾಲರು ಹಾಕಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

ತಾಲ್ಲೂಕಿನ ಮುನಿರಾಬಾದ್ ನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ಧ ನೇರವಾಗಿ ಕಟು ಟೀಕೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸೇಡಿನ ರಾಜಕಾರಣ ಮಾಡಲು ಹೊರಟಿದೆ ಎಂದರು.

ADVERTISEMENT

ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುತ್ತಾರೆ ಎನ್ನುವ ಅನುಮಾನವಿತ್ತು. 136 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಕುತಂತ್ರ ಮಾಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರ ಜನಪ್ರಿಯತೆ ಅರಗಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಪಕ್ಷಪಾತಿಯಾಗಿರುವ ರಾಜ್ಯಪಾಲರನ್ನು ಕೇಂದ್ರ ಕೂಡಲೆ ವಾಪಸ್ ಕರೆಯಿಸಿಕೊಳ್ಳಬೇಕು. ಪಕ್ಷದ ಎಲ್ಲ ಶಾಸಕರು ಮುಖ್ಯಮಂತ್ರಿ ಅವರ ಜೊತೆ ನಿಲ್ಲುತ್ತೇವೆ. ಕಾನೂನು ಹೋರಾಟ ನಡೆಸಿ ಗೆಲ್ಲುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ನಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿಗೆ ಯಾವ ನೈತಿಕ ಹಕ್ಕೂ ಇಲ್ಲ, ಸಿದ್ದರಾಮಯ್ಯ ಅವರ ಜನಪ್ರಿಯತೆ ಹಾಗೂ ಡಿ.ಕೆ. ಶಿವಕುಮಾರ್ ಸಂಘಟನಾ ಶಕ್ತಿಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಸರ್ಕಾರ ಅಸ್ಥಿರಗೊಳಿಸುವ ಯಾವ ಕುತಂತ್ರಕ್ಕೂ ನಾವು ಬಗ್ಗುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.