ADVERTISEMENT

‘ಎನ್ಇಪಿ’ಯಲ್ಲಿ ದೇಸಿ ಕಲೆಗಳ ಕಲಿಕೆಗೆ ಒತ್ತು: ಸಿ.ಎನ್.ಅಶ್ವತ್ಥನಾರಾಯಣ

ಮೂಡಲಪಾಯ ಯಕ್ಷಗಾನ ಪರಿಷತ್ ಉದ್ಘಾಟನೆಯಲ್ಲಿ ಸಚಿವ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 19:30 IST
Last Updated 10 ಜನವರಿ 2022, 19:30 IST
ಮೂಡಲಪಾಯ ಯಕ್ಷಗಾನ ಪರಿಷತ್ತನ್ನು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಶಾಸಕ ಎಂ.ಶ್ರೀನಿವಾಸ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಮಂಡ್ಯ ಕನ್ನಡ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ, ಆದಾಯ ತೆರಿಗೆಯ ಅಧಿಕಾರಿ ಜಯರಾಮ ರಾಯಪುರ ಇದ್ದಾರೆ.
ಮೂಡಲಪಾಯ ಯಕ್ಷಗಾನ ಪರಿಷತ್ತನ್ನು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಶಾಸಕ ಎಂ.ಶ್ರೀನಿವಾಸ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಮಂಡ್ಯ ಕನ್ನಡ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ, ಆದಾಯ ತೆರಿಗೆಯ ಅಧಿಕಾರಿ ಜಯರಾಮ ರಾಯಪುರ ಇದ್ದಾರೆ.   

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಮೂಡಲಪಾಯದಂತಹ ದೇಸಿ ಮತ್ತು ಸ್ಥಳೀಯ ಕಲೆಗಳ ಕಲಿಕೆಗೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನಗರದದಲ್ಲಿ ಸೋಮವಾರ ನಡೆದ ಮೂಡಲಪಾಯ ಯಕ್ಷಗಾನ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಪರಿಪೂರ್ಣ ವಿಕಸನದ ಗುರಿ ಹೊಂದಿರುವ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಹಂತದಿಂದಲೇ ಕಲೆಗಳ ಕಲಿಕೆಗೆ ಒತ್ತು ಕೊಡಲಾಗಿದೆ. ಅದಕ್ಕೆ ಬೇಕಾದ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಈ ನೀತಿ ಒಳಗೊಂಡಿದೆ’ ಎಂದರು.

ADVERTISEMENT

‘ಮೂಡಲಪಾಯ ಯಕ್ಷಗಾನವು ದಕ್ಷಿಣ ಕರ್ನಾಟಕದ ಸಾಂಸ್ಕೃತಿಕ ಸಿರಿವಂತಿಕೆಗೆ ಒಂದು ನಿದರ್ಶನ.ಹಳೆಯ ಮೈಸೂರು ಭಾಗದಲ್ಲಿ ಮೂಡಲಪಾಯ ಯಕ್ಷಗಾನವು ಕಾರಣಾಂತರಗಳಿಂದ ನೇಪಥ್ಯಕ್ಕೆ ಸರಿದಿದೆ. ಈ ಪ್ರದೇಶದ ಪ್ರತಿ ಮನೆಯಲ್ಲೂ ಕಲಾವಿದರಿದ್ದು, ಒಮ್ಮೆಯಾದರೂ ಬಣ್ಣ ಹಚ್ಚಿಕೊಂಡು ರಂಗದ ಮೇಲೆ ಅಭಿನಯಿಸಿರುತ್ತಾರೆ. ಇಂತಹ ಶ್ರೀಮಂತ ಕಲಾ ಪ್ರಕಾರವನ್ನು ಕಾಲಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸಬೇಕು’ ಎಂದು ಹೇಳಿದರು.

‘ಯಾವ ವೃತ್ತಿಯಲ್ಲಿ ತೊಡಗಿಕೊಂಡರೂವ್ಯಕ್ತಿಗೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಗಳು ಇರಲೇಬೇಕು. ಇಲ್ಲದಿದ್ದರೆ ಬದುಕಿನ ಆನಂದ ಸಿಗುವುದಿಲ್ಲ’ ಎಂದರು.

ಮಂಡ್ಯದ ಬೇಲೂರು ಪ್ರೌಢಶಾಲೆಯ ಮಕ್ಕಳು ‘ಕರ್ಣಾವಸಾನ’ ಮತ್ತು ಹನಕೆರೆಯ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.