ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಮುಂಬೈ, ಚೆನ್ನೈ ಮಾದರಿ: ಸಚಿವ ಲಿಂಬಾವಳಿ

ವಾರ್ಡ್‌ ಮಟ್ಟದಲ್ಲಿ 50 ಮಂದಿಯ ಸಮಿತಿ ರಚನೆ * ಆಸ್ಪತ್ರೆಗೆ ದಾಖಲಾಗಲು, ಬಿಡುಗಡೆ ಹೊಂದಲು ಬಯೋಮೆಟ್ರಿಕ್‌ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 8 ಮೇ 2021, 19:44 IST
Last Updated 8 ಮೇ 2021, 19:44 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಬೆಂಗಳೂರು: ‘ಕೋವಿಡ್‌ ನಿಯಂತ್ರಿಸಲು ಮುಂಬೈ ಮತ್ತು ಚೆನ್ನೈನಲ್ಲಿ ಅನುಸರಿಸಿದ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ’ ಎಂದು ಕೋವಿಡ್‌ ವಾರ್‌ ರೂಂ ಮತ್ತು ಕಾಲ್‌ ಸೆಂಟರ್‌ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಪ್ರತಿ ವಾರ್ಡಿನಲ್ಲಿ ವೈದ್ಯರು, ದಾದಿಯರು, ಸ್ವಯಂ
ಸೇವಕರು, ಸ್ಥಳೀಯ ನಿವಾಸಿಗಳ ಸಂಘಗಳ ಪದಾಧಿಕಾರಿಗಳಿರುವ ಕನಿಷ್ಠ 50 ಜನರ ಸಮಿತಿ ರಚಿಸಲಾಗುವುದು. ಈ ಸಮಿತಿ ಸೋಂಕಿತರನ್ನು ಚಿಕಿತ್ಸೆಯ ಅಗತ್ಯವನ್ನು ಆದ್ಯತೆ ಆಧಾರದಲ್ಲಿ ನಿರ್ಧರಿಸುವ ಕೇಂದ್ರಕ್ಕೆ (ಟ್ರಯೇಜಿಂಗ್ ಸೆಂಟರ್‌) ಕರೆತಂದು, ರೋಗಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಿಸಲಿದೆ’ ಎಂದರು.

‘ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ತರಲಾಗುವುದು’ ಎಂದರು.

ADVERTISEMENT

‘ವಾರ್ಡ್‌ ಸಮಿತಿಗಳು ಸಾಧಾರಣ ರೋಗಲಕ್ಷಣ ಇರುವವರಿಗೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಲು ತಿಳಿಸಿ, ಔಷದ ಕಿಟ್ ಒದಗಿಸಲಿವೆ. ಆಸ್ಪತ್ರೆಗೆ ದಾಖಲಿಸಬೇಕಾದವರನ್ನು ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಗೆ ದಾಖಲಿಸಲಿದೆ’ ಎಂದರು.

‘ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ರೋಗಿಗಳ ಆರೈಕೆ ಕೇಂದ್ರ ಆರಂಭಿಸಲಾಗುವುದು. ಅಲ್ಲಿನ ರೋಗಿಗಳ ವಿವರ
ಗಳನ್ನು ಕೇಂದ್ರ ಜಿಲ್ಲಾ ವಾರ್ ರೂಂಗೆ ಕಳುಹಿಸುವಂತೆ ಸೂಚಿಸಲಾಗಿದೆ. ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಸಾಮಾನ್ಯ ಹಾಸಿಗೆ, ತೀವ್ರ ನಿಗಾ ಘಟಕಗಳ (ಐಸಿಯು) ಹಾಗೂ ತೀವ್ರ ಅವಲಂಬನೆ ಘಟಕ (ಎಚ್‌ಡಿಯು) ಹಾಸಿಗೆಗಳ ವಿವರ ಪ್ರದರ್ಶಿಸವಂತೆಯೂ ಸೂಚಿಸಲಾಗಿದೆ’ ಎಂದರು

‘ಬೆಂಗಳೂರಿನಲ್ಲಿ 9 ಕಡೆ (ಎಂಟು ವಲಯ ಮತ್ತು ಕೇಂದ್ರ ಕಚೇರಿ) ನಿಯಂತ್ರಣ ಕೇಂದ್ರಗಳಿವೆ. ಅಲ್ಲಿನ ಕರೆ ಸಂಪರ್ಕ ಮಾರ್ಗಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗಿದೆ. 1912 ಸಹಾಯವಾಣಿಯ ಕರೆ ಸಂಪರ್ಕ ಮಾರ್ಗಗಳ ಸಂಖ್ಯೆಯನ್ನು 60ರಿಂದ 250ಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ. ಹಾಸಿಗೆ ಹಂಚಿಕೆ ಆದವರಿಗೆ ಇನ್ನು ತಕ್ಷಣವೇ ಎಸ್ಎಂಎಸ್ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಐಸಿಯು, ಎಚ್‌ಡಿಯು, ರೋಗಿಗಳ ಅಂಕಿಅಂಶವನ್ನು ಪ್ರತಿ ಐದು ದಿನಗಳಿಗೊಮ್ಮೆ ಸಂಗ್ರಹಿಸಲಾಗುತ್ತಿತ್ತು. ಇನ್ನು ನಿತ್ಯವೂ ಪರಿಶೀಲಿಸಲು ಸೂಚಿಸಲಾಗಿದೆ. ಪ್ರತಿದಿನವೂ ಸರ್ಕಾರಿ ಕೋಟಾದಡಿ ದಾಖಲಾಗುವ ರೋಗಿಗಳ ವಿವರಗಳನ್ನು ಆಯಾ ಆಸ್ಪತ್ರೆಯ ನೋಡಲ್ ಅಧಿಕಾರಿಗಳು ಮತ್ತು ಸಹಾಯಕ ನೋಡಲ್ ಅಧಿಕಾರಿಗಳು ಆರೋಗ್ಯ ಮಿತ್ರ ಸಿಬ್ಬಂದಿಯ ಸಹಾಯ ಪಡೆದು ನೇರವಾಗಿ ಪರಿಶೀಲಿಸಿ ಕಡ್ಡಾಯವಾಗಿ ಮೇಲಧಿಕಾರಿಗಳಿಗೆ ವರದಿ ಮಾಡಬೇಕು’ ಎಂದು ಲಿಂಬಾವಳಿ ಹೇಳಿದರು.

‘ಹಾಸಿಗೆ ಹಂಚಿಕೆ ವ್ಯವಸ್ಥೆ ಸುಧಾರಣೆಗೆ ಈಗ ಪ್ರತಿ ಕೇಂದ್ರದ ಕಂಪ್ಯೂಟರಿನ ಐ -ಮ್ಯಾಕ್ ಐಡಿ ಹೊಂದಿರುವವರು ಇನ್ನು ಮುಂದೆ ಹೆಸರನ್ನು ಸಹ ನಮೂದಿಸಬೇಕು ಎಂಬ ನಿಯಮ ಕಡ್ಡಾಯಗೊಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.