ADVERTISEMENT

ಅತ್ಯಾಚಾರಕ್ಕೆ ಯತ್ನಿಸಿ ಬಾಲಕಿ ಕೊಲೆ: 17 ವರ್ಷದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 13:16 IST
Last Updated 3 ಡಿಸೆಂಬರ್ 2020, 13:16 IST

ಮಂಡ್ಯ: ಮದ್ದೂರು ತಾಲ್ಲೂಕು ಹುರುಗಲವಾಡಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿ ಪರಾರಿಯಾಗಿದ್ದ 17 ವರ್ಷ ವಯಸ್ಸಿನ ಬಾಲಕನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಘಟನೆಯ ನಂತರ ಆರೋಪಿ ಕಬ್ಬಿನಗದ್ದೆಯಲ್ಲೇ ಅವಿತು ಕುಳಿತಿದ್ದ. ನಂತರ ತನಗೆ ಏನೂ ಗೊತ್ತಿಲ್ಲ ಎಂದು ನಟಿಸಿ ಪರಾರಿಯಾಗಿದ್ದ. ಅನುಮಾನಗೊಂಡ ಪೊಲೀಸರು ಆತನ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಆತನೇ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆತನ ಬಟ್ಟೆಯ ಮೇಲೆ ರಕ್ತದ ಗುರುತು ಇರುವುದು ಪತ್ತೆಯಾಗಿದೆ.

‘ಆರೋಪಿಯು ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆಕೆ ಒಪ್ಪದಿದ್ದಾಗ ಕೆಳಕ್ಕೆ ಬೀಳಿಸಿದ್ದಾನೆ. ನಂತರ ಆಕೆ ಕಿರುಚಿಕೊಂಡಾಗ ಆರೋಪಿ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಕೊಲೆಯಾದ ಬಾಲಕಿ ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಾಂಡವೊಂದಕ್ಕೆ ಸೇರಿದ್ದು ಕಬ್ಬು ಕಡಿಯಲು ಕುಟುಂಬ ಸಮೇತರಾಗಿ ಹುರುಗಲವಾಡಿ ಗ್ರಾಮಕ್ಕೆ ಬಂದಿದ್ದರು. ಘಟನೆಯ ನಂತರ ಶವವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು.

ಸಮಾಜ ಕಲ್ಯಾಣ ಇಲಾಖೆಯಿಂದ ₹ 8.25 ಲಕ್ಷ, ಕೊಪ್ಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ₹ 2.75 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

ವಲಸಿಗರಿಗೆ ರಕ್ಷಣೆ ಇಲ್ಲ: ಕಬ್ಬು ಕಡಿಯಲು ಜಿಲ್ಲೆಗೆ ಬಂದಿರುವ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದ ಒತ್ತಾಯಿಸಿ ಬಳ್ಳಾರಿ ಜಿಲ್ಲೆಯಿಂದ ಬಂದಿದ್ದ ವಿವಿಧ ಸಂಘಟನೆಗಳ ಮುಖಂಡರು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಸ್ಥಳೀಯ ಸಂಘಟನೆಗಳ ಕಾರ್ಯಕರ್ತರೂ ಅವರಿಗೆ ಸಾಥ್‌ ಕೊಟ್ಟರು.

‘ಕಬ್ಬು ಕಡಿಯಲು ನೂರಾರು ಕಿ.ಮೀ ದೂರದಿಂದ ಬಂದಿರುವ ಕಾರ್ಮಿಕರಿಗೆ ಇಲ್ಲಿ ಸೂಕ್ತ ರಕ್ಷಣೆ ಇಲ್ಲ. ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ನಾಯಕ ಹೇಳಿದರು.

ಲಂಬಾಣಿ ಸಮುದಾಯದ ಮುಖಂಡ ಕೃಷ್ಣ ನಾಯಕ್, ಭೋವಿ ಸಂಘದ ಗುರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.