ADVERTISEMENT

ಬೆಂಗಳೂರು: ಕೊಲೆ ಅಪರಾಧಿ ಜೀವಾವಧಿ ಶಿಕ್ಷೆ ರದ್ದು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 13:43 IST
Last Updated 12 ಆಗಸ್ಟ್ 2025, 13:43 IST
   

ಬೆಂಗಳೂರು: ‘ಕೊಲೆ ಪ್ರಕರಣವೊಂದರಲ್ಲಿ ಆರೋಪಿಯು ಕೃತ್ಯ ಎಸಗಿದ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದ’ ಎಂಬ ವಾದಾಂಶವನ್ನು ಪರಿಗಣಿಸಿ, ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಯಾದಗಿರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದ ಶಹಾಪೂರ ತಾಲ್ಲೂಕಿನ ಹಳಿಸಗರ ಗ್ರಾಮದ ಚನ್ನಪ್ಪ ಬಿನ್‌ ಸಾಯಿಬಣ್ಣ ಸಿರವಾಳ (30) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಬಾಲಾಪರಾಧಿಯನ್ನು ವಯಸ್ಕ ಎಂದು ತಪ್ಪಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್‌ ನ್ಯಾಯಾಲಯದ ಕ್ರಮ ಕಾನೂನು ಬಾಹಿರ’ ಎಂದು ಸಾರಿದೆ.

‘ಆರೋಪಿಗೆ ಶಿಕ್ಷೆ ವಿಧಿಸಿರುವುದು ಸರಿಯಾಗಿಯೇ ಇದ್ದರೂ, ಆತ ಕೃತ್ಯ ಎಸಗಿದ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದ ಎಂಬ ಕಾರಣಕ್ಕಾಗಿ ಶಿಕ್ಷೆ ರದ್ದುಪಡಿಸಲಾಗುತ್ತಿದೆ. ಹೀಗಾಗಿ, ಅಪರಾಧಿಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ನ್ಯಾಯಪೀಠ ಬಾಲ ನ್ಯಾಯಮಂಡಳಿಗೆ ನಿರ್ದೇಶಿಸಿದೆ.

ADVERTISEMENT

‘ಅಧಿಕಾರಿಗಳು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೊದಲ ಹಂತದಲ್ಲೇ ಬಾಲಾಪರಾಧಿಗಳನ್ನು ಸರಿಯಾಗಿ ಗುರುತಿಸಬೇಕು. ಅಪರಾಧಿಯ ವಯಸ್ಸಿನ ಕುರಿತು ಯಾವುದೇ ಸಂಶಯ ಎದುರಾದಾಗ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಬಂಧನಕ್ಕೆ ಆದೇಶಿಸುವಾಗ ಇಂತಹ ಅಂಶಗಳನ್ನು ಪುನಃ ಪರಿಶೀಲನೆಗೆ ಒಳಪಡಿಸಬೇಕು’ ಎಂದು ನ್ಯಾಯಪೀಠ ವಿವರಿಸಿದೆ.

‘ಅರ್ಜಿದಾರರು ಈಗಾಗಲೇ 13 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದ್ದರಿಂದ, ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ–2000ರ ಕಲಂ 15ರ ಅಡಿಯಲ್ಲಿ ಬಾಲ ನ್ಯಾಯಮಂಡಳಿ ಪುನಃ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು?: ಚನ್ನಪ್ಪ ಅವರ ಸಹೋದರಿಯನ್ನು ಭೀಮರಾಯ ಎಂಬುವರು ಮದುವೆಯಾಗಿದ್ದರು. ಇದಕ್ಕೆ ಚನ್ನಪ್ಪ ಅವರ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕೋಪಗೊಂಡಿದ್ದ 16 ವರ್ಷದ ಚನ್ನಪ್ಪ 2011ರ ಏಪ್ರಿಲ್‌ನಲ್ಲಿ ಹಳಿಸಗರ ಗ್ರಾಮದಲ್ಲಿ ಭೀಮರಾಯನನ್ನು ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ ಚನ್ನಪ್ಪಗೆ ಜೀವಾವಧಿ ಶಿಕ್ಷೆ ಮತ್ತು ₹2 ಸಾವಿರ ದಂಡ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.