ADVERTISEMENT

ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಎಲ್ಲರಿಗೂ ಆಸೆ ಇದೆ: ಮುರುಗೇಶ್ ನಿರಾಣಿ

ರಾಜ್ಯಾಧ್ಯಕ್ಷ ಹುದ್ದೆ ವರಿಷ್ಠರ ನಿರ್ಧಾರ: ನಿರಾಣಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 11:13 IST
Last Updated 24 ಜನವರಿ 2025, 11:13 IST
ಮುರುಗೇಶ್ ಆರ್‌. ನಿರಾಣಿ
ಮುರುಗೇಶ್ ಆರ್‌. ನಿರಾಣಿ   

ಬೆಂಗಳೂರು: ‘ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸುವ ಅಥವಾ ಮುಂದುವರೆಸದೇ ಇರುವ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು. ಆ ಹುದ್ದೆಯ ಬಗ್ಗೆ ಪಕ್ಷದ ಎಲ್ಲ ಶಾಸಕರಿಗೂ ಆಸೆ ಇದೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಪಕ್ಷದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಿಲ್ಲಾ ಆಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೂ ಚುನಾವಣೆ ನಡೆಯುತ್ತದೆ. ಈಗ ಸಂಘಟನಾ ಪರ್ವ ನಡೆಯುತ್ತಿದ್ದು, ಎಲ್ಲವೂ ಬದಲಾಗಲಿದೆ. ವಿಜಯೇಂದ್ರ ಅವರನ್ನು ಮಧ್ಯಂತರದಲ್ಲಿ ರಾಜ್ಯ ಘಟಕದ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಅವರ ಕಾರ್ಯಕ್ಷಮತೆಯನ್ನು ನೋಡಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು.

ರಾಜ್ಯಾಧ್ಯಕ್ಷ ಹುದ್ದೆಯ ಬಗ್ಗೆ ನಿಮಗೂ ಆಸೆ ಇದೆಯೇ ಎಂಬ ಪ್ರಶ್ನೆಗೆ, ‘ನಾವು ಈ ಹಿಂದೆ 100ಕ್ಕೂ ಹೆಚ್ಚು ಶಾಸಕರಿದ್ದೆವು. ಈಗ 60ಕ್ಕೂ ಹೆಚ್ಚು ಮಂದಿ ಇದ್ದೇವೆ. ಎಲ್ಲರಿಗೂ ಆ ಹುದ್ದೆಯ ಬಗ್ಗೆ ಆಸೆ ಇರುತ್ತದೆ. ಅದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಆಸೆಗಿಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಅಮಿತ್‌ ಶಾ ಮತ್ತು ನರೇಂದ್ರ ಮೋದಿ ಅವರ ನಿರ್ಧಾರವೇ ಅಂತಿಮ’ ಎಂದು ಉತ್ತರಿಸಿದರು.

ADVERTISEMENT

‘ಪಕ್ಷದಲ್ಲಿನ ಅಸಮಾಧಾನ ಢಾಳಾಗಿ ಕಾಣುತ್ತಿದೆ. ಆದರೆ ಈ ಎಲ್ಲವನ್ನೂ ಗಮನಿಸಿರುವ ವರಿಷ್ಠರು ಕೆಲವರೊಂದಿಗೆ ಫೋನ್‌ಕರೆಯಲ್ಲಿ ಮಾತನಾಡಿದ್ದಾರೆ. ಕೆಲವರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ. ಇನ್ನು 8–10 ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಲಿದ್ದೇವೆ’ ಎಂದರು.

ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅಣ್ಣತಮ್ಮಂದಿರ ರೀತಿ. ಸ್ವಲ್ಪ ಅಸಮಾಧಾನವಾಗಿದೆ. ರಾಮುಲು ಅವರನ್ನು ಕಾಂಗ್ರೆಸ್‌ನವರು ಕರೆದಿಲ್ಲ, ಅವರು ಹೋಗುವುದೂ ಇಲ್ಲ

ಮುರುಗೇಶ ನಿರಾಣಿ, ಉಪಾಧ್ಯಕ್ಷ, ಬಿಜೆಪಿ ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.