ADVERTISEMENT

ಮುರುಘಾ ಮಠದ ಹಾಸ್ಟೆಲ್‌: ಆಂಧ್ರದ ವಿದ್ಯಾರ್ಥಿನಿಯ ಸಾವಿನ ತನಿಖೆ

ಸಂತ್ರಸ್ತೆಯರ ಶಂಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:10 IST
Last Updated 7 ನವೆಂಬರ್ 2022, 20:10 IST
ಮುರುಘಾ ಮಠ
ಮುರುಘಾ ಮಠ   

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹಪಾಠಿಯ ಸಾವಿನ ಬಗ್ಗೆ, ಪೋಕ್ಸೊ ಸಂತ್ರಸ್ತ ವಿದ್ಯಾರ್ಥಿನಿಯರು ವ್ಯಕ್ತಪಡಿಸಿದ ಅನುಮಾನದ ಜಾಡು ಹಿಡಿದು ಪೊಲೀಸರು ಆಂಧ್ರಪ್ರದೇಶಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಸಂಗತಿ ತನಿಖೆಯಿಂದ ದೃಢಪಟ್ಟಿದೆ.

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು, ತನಿಖೆಯ ಭಾಗವಾಗಿ ಹೇಳಿಕೆ ನೀಡಿದಾಗ ತಮ್ಮ ಸಹಪಾಠಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಪೋಕ್ಸೊ ಪ್ರಕರಣದ ತನಿಖೆ ನಡೆಸುತ್ತಿದ್ದ ಡಿವೈಎಸ್‌ಪಿ ಅನಿಲ್‌ಕುಮಾರ್‌ ನೇತೃತ್ವದ ತಂಡ ವಿದ್ಯಾರ್ಥಿನಿಯ ಸಾವಿನ ಸತ್ಯಾಸತ್ಯತೆ ಅರಿಯಲು ಆಂಧ್ರಪ್ರದೇಶದ ಹಿಂದೂಪುರಕ್ಕೆ ಭೇಟಿ ನೀಡಿತ್ತು. ಮೂಲತಃ ಆಂಧ್ರಪ್ರದೇಶದ ವಿದ್ಯಾರ್ಥಿನಿ ಮುರುಘಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹಾಸ್ಟೆಲ್‌ನಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯರೊಂದಿಗೆ ಆಶ್ರಯ ಪಡೆದಿದ್ದಳು. ಮೂರು ವರ್ಷಗಳ ಹಿಂದೆ ಈ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಮೃತಪಟ್ಟಿರುವ ವಿಷಯ ತಿಳಿದಿತ್ತು. ಆದರೆ, ಸಹಪಾಠಿಯ ಸಾವು ಪೋಕ್ಸೊ ಸಂತ್ರಸ್ತ ವಿದ್ಯಾರ್ಥಿನಿಯರಲ್ಲಿ ಸಂಶಯ, ಆತಂಕ ಮೂಡಿಸಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.

ADVERTISEMENT

‘ಆಂಧ್ರಪ್ರದೇಶದ ಹಿಂದೂಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದು ರೈಲ್ವೆ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿತ್ತು. ಈ ಮಾಹಿತಿಯನ್ನು ತನಿಖಾ ತಂಡ ಕಲೆಹಾಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.