ADVERTISEMENT

ಚಿತ್ರದುರ್ಗ: ಮುರುಘಾ ಶರಣರ ಶೂನ್ಯ ಪೀಠಾರೋಹಣ

ಸರಳವಾಗಿ ನೆರವೇರಿದ ಸಂಪ್ರದಾಯ, ಪಲ್ಲಕ್ಕಿಯಲ್ಲಿ ಹಸ್ತಪ್ರತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 10:11 IST
Last Updated 27 ಅಕ್ಟೋಬರ್ 2020, 10:11 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಂಗಳವಾರ ಶೂನ್ಯ ಪೀಠಾರೋಹಣಕ್ಕೂ ಮುನ್ನ ರುದ್ರಾಕ್ಷಿ ಕಿರೀಟ ಧರಿಸಿ ಮುರುಘಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಭಕ್ತಿ ಸಮರ್ಪಿಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಂಗಳವಾರ ಶೂನ್ಯ ಪೀಠಾರೋಹಣಕ್ಕೂ ಮುನ್ನ ರುದ್ರಾಕ್ಷಿ ಕಿರೀಟ ಧರಿಸಿ ಮುರುಘಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಭಕ್ತಿ ಸಮರ್ಪಿಸಿದರು.   

ಚಿತ್ರದುರ್ಗ: ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾ ಮಠದಲ್ಲಿ ಮಂಗಳವಾರ ಸಂಭ್ರಮ ಮನೆ ಮಾಡಿತ್ತು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶಿವಮೂರ್ತಿ ಮುರುಘಾ ಶರಣರು ಶೂನ್ಯ ಪೀಠಾರೋಹಣ ನೆರವೇರಿಸಿ ಭಕ್ತರಿಗೆ ದರ್ಶನ ನೀಡಿದರು.

ಮಠದ ಪೀಠಾಧ್ಯಕ್ಷರು ಚಿನ್ನದ ಕಿರೀಟ, ಬಂಗಾರದ ಪಾದುಕೆ ಹಾಗೂ ಆಭರಣ ಧರಿಸಿ ರತ್ನಖಚಿತ ಸಿಂಹಾಸನದ ಪೀಠಾರೋಹಣ ಮಾಡುವುದು ವಾಡಿಕೆ. ಈ ಆಡಂಬರದ ಆಚರಣೆಯನ್ನು ಸರಳೀಕರಿಸಿದ ಮುರುಘಾ ಶರಣರು ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಧರಿಸುವ ಪರಂಪರ ಆರಂಭಿಸಿದರು. ಮರದ ಪಾದುಕೆ ಧರಿಸಿ, ಮರದ ಆಸನದ ಮೇಲೆ ಕುಳಿತು ಸರಳತೆ ಮೆರೆದರು. ಕೊರೊನಾ ಕಾರಣಕ್ಕೆ ಈ ಉತ್ಸವ ಇನ್ನಷ್ಟು ಸರಳತೆ ಪಡೆಯಿತು.

ಪೀಠಾರೋಹಣದ ಅಂಗವಾಗಿ ತಳಿರು – ತೋರಣಗಳಿಂದ ಮಠ ಕಂಗೊಳಿಸುತ್ತಿತ್ತು. ಕಲ್ಲಿನ ಗೋಡೆಯ ಮೇಲೆ ತರಹೇವಾರಿ ಪುಷ್ಪಗಳು ಅರಳಿದ್ದವು. ವೀರಗಾಸೆ, ಕಹಳೆ ಸೇರಿ ಇತರ ಕಲಾತಂಡಗಳು ಉತ್ಸವದ ಮೆರಗು ಹೆಚ್ಚಿಸಿದವು. ಪೀಠಾರೋಹಣ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿ ಕಾಯುತ್ತಿದ್ದರು. ನಿಗದಿಯಂತೆ ಬೆಳಿಗ್ಗೆ 10ಕ್ಕೆ ಕೈಂಕರ್ಯಗಳು ಆರಂಭವಾದವು.

ADVERTISEMENT

ಮಠದ ಪ್ರಾಂಗಣದಲ್ಲಿರುವ ಹಿರಿಯ ಗುರುಗಳಾದ ಮುರುಘಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ತೆರಳಿದ ಶರಣರು, ಭಕ್ತಿ ಸಮರ್ಪಿಸಿದರು. ಚಿನ್ನದ ಕಿರೀಟ, ಪಾದುಕೆ ಹಾಗೂ ಆಭರಣಗಳನ್ನು ಭಕ್ತರಿಗೆ ನೀಡಿದರು. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೀಡಿದ ರುದ್ರಾಕ್ಷಿ ಕಿರೀಟವನ್ನು ಧರಿಸಿದರು. ರುದ್ರಾಕ್ಷಿ ಮಾಲೆಯನ್ನು ಹಾಕಿಕೊಂಡು, ಕೈಯಲ್ಲಿ ವಚನಗಳ ಪ್ರತಿ ಹಿಡಿದರು. ಆಗ ಮಠದಲ್ಲಿ ಜೈಕಾರಗಳು ಮೊಳಗಿದವು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರಣರು, ‘ಕೊರೊನಾ ಸೋಂಕು ದೇಶದ ಎಲ್ಲೆಡೆ ವ್ಯಾಪಿಸಿದೆ. ಜನಜೀವನ ಅಸ್ತವ್ಯವಸ್ತವಾಗಿದೆ. ಜೀವ ಉಳಿಸಿಕೊಂಡು ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೇ ಬದುಕು ಸಾಗಬೇಕಿದೆ. ವಿಜೃಂಭಣೆ ಕೈಬಿಟ್ಟು, ಸಾಂಕೇತಿಕ ಆಚರಣೆಗೆ ಉತ್ಸವ ಸೀಮಿತಗೊಂಡಿದೆ’ ಎಂದು ಹೇಳಿದರು.

‘ಸ್ವಾಮೀಜಿ ಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ನೀಡುವುದು ಮಠದ ಪರಂಪರೆ. ಚಿನ್ನದ ಕಿರೀಟ ಧರಿಸಿ, ಬಂಗಾರದ ಪಾದುಕೆ ತೊಟ್ಟು, ಆಭರಣ ಹಾಕಿಕೊಳ್ಳಲಾಗುತ್ತಿತ್ತು. ಈ ಸಂಪ್ರದಾಯವನ್ನು ತ್ಯಜಿಸಿ, ರುದ್ರಾಕ್ಷಿ ಕಿರೀಟ ಧರಿಸಿ, ಕೈಯಲ್ಲಿ ವಚನ ಹಿಡಿದು ಮರದ ಪೀಠದ ಮೇಲೆ ಕುಳಿತು ದರ್ಶನ ನೀಡಲಾಗುತ್ತಿದೆ. ಅದ್ದೂರಿ, ಆಡಂಬರವನ್ನು ಕೈಬಿಡಲಾಗಿದೆ’ ಎಂದರು.

ಪೀಠದ ಬಳಿಗೆ ತೆರಳುವ ಶರಣರನ್ನು ಕಣ್ತುಂಬಿಕೊಳ್ಳಲು ಭಕ್ತರು ಮುಗಿಬಿದ್ದಿದ್ದರು. ವಿವಿಧ ಮಠಾಧೀಶರು, ಸಾಧಕರು, ಭಕ್ತರು, ಉತ್ಸವ ಸಮಿತಿ ಸದಸ್ಯರು, ನೂರಾರು ಜನರ ಘೋಷಣೆಗಳೊಂದಿಗೆ ಶರಣರು ಶೂನ್ಯ ಪೀಠಾರೋಹಣ ಮಾಡಿದರು. ಭಕ್ತರು ಸರತಿ ಸಾಲಿನಲ್ಲಿ ಸಾಗಿ ಶರಣರ ದರ್ಶನ ಪಡೆದರು. ಪಾದಕ್ಕೆ ಎರಗಿ ಫಲಪುಷ್ಪ ಸಹಿತ ಭಕ್ತಿ ಸಮರ್ಪಿಸಿದರು. ಸುಮಾರು ಅರ್ಧ ಗಂಟೆ ಪೀಠದಲ್ಲಿ ಕುಳಿತು ಸಂಪ್ರದಾಯ ಪೂರೈಸಿದರು. ಮತ್ತೊಂದು ಬಾಗಿಲ ಮೂಲಕ ಹೊರನಡೆದು ರುದ್ರಾಕ್ಷಿ ಕಿರೀಟವನ್ನು ಬಿಚ್ಚಿಟ್ಟರು.

ಪೀಠಾರೋಹಣಕ್ಕೆ ಸಾವಿರಾರು ಭಕ್ತರು ಸೇರುತ್ತಿದ್ದರು. ಕೊರೊನಾ ಸೋಂಕಿನ ಕಾರಣಕ್ಕೆ ಉತ್ಸವ ಸರಳ ರೂಪ ಪಡೆದಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ನಿಯೋಜನೆಗೊಂಡಿದ್ದರು. ಮಠದ ಮುಂಭಾಗದಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು. ನಿಗದಿತ ಅವಧಿಯೊಳಗೆ ಬಂದಿದ್ದ ಭಕ್ತರಿಗೆ ಮಾತ್ರ ಮಠ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಪ್ರಾಚೀನ ಹಸ್ತಪ್ರತಿ ಮೆರವಣಿಗೆ

ಶಿವಮೂರ್ತಿ ಮುರುಘಾ ಶರಣರು ಶೂನ್ಯ ಪೀಠಾರೋಹಣ ಮಾಡಿದ ಬಳಿಕ ಪ್ರಾಚೀನ ಹಸ್ತಪ್ರತಿ ಹಾಗೂ ಬಸವಣ್ಣ, ಅಲ್ಲಮಪ್ರಭು ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಪುಷ್ಪಗಳಿಂದ ಸಿಂಗರಿಸಿದ ಪಲ್ಲಕ್ಕಿಯಲ್ಲಿ ಶೂನ್ಯ ಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ಹಾಗೂ ಬಸವಣ್ಣನವರ ಭಾವಚಿತ್ರ ಇರಿಸಲಾಗಿತ್ತು. ಶೂನ್ಯಪೀಠಾರೋಹಣ ನೆರವೇರಿದ ನಂತರ ಹಸ್ತಪ್ರತಿಗಳನ್ನು ಮಠದಿಂದ ಹೊರತರಲಾಯಿತು. ರುದ್ರಾಕ್ಷಿ ಕಿರೀಟ ಬಿಚ್ಚಿಟ್ಟು ಬಂದ ಶರಣರು ಪಲ್ಲಿಕ್ಕಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ಪಲ್ಲಕ್ಕಿಯ ಮುಂಭಾಗದಲ್ಲಿ ರಾಜಗಾಂಭೀರ್ಯದಿಂದ ಆನೆ ಹೆಜ್ಜೆ ಹಾಕುತ್ತಿತ್ತು. ಇದರ ಮುಂದೆ ವಾದ್ಯ ಮೇಳಗಳು ಸಾಗಿದವು. ಪಲ್ಲಕ್ಕಿಗೆ ಹೆಗಲು ಕೊಡುತ್ತ ಭಕ್ತರು ಭಕ್ತಿ ಸಮರ್ಪಿಸಿದರು. ಮಠದ ಹೊರಭಾಗದಲ್ಲಿ ನಿಂತಿದ್ದ ಭಕ್ತರು ಮೆರವಣಿಗೆ ಕಣ್ತುಂಬಿಕೊಂಡರು. ಮುರುಘಾ ಶರಣರು, ಅಲ್ಲಮ ಪ್ರಭುವಿಗೆ ಭಕ್ತರು ಜೈಕಾರ ಹಾಕಿದರು. ಉತ್ಸವದ ನೇರಪ್ರಸಾರವನ್ನು ಫೇಸ್‌ಬುಕ್ ಹಾಗೂ ಯುಟ್ಯೂಬ್‌ನಲ್ಲಿ ಭಕ್ತರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.