ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ ಮಧ್ಯೆ ಮುಖ್ಯಮಂತ್ರಿ ಗಾದಿಗಾಗಿ ‘ಮ್ಯೂಸಿಕಲ್ ಚೇರ್’ ಸ್ಪರ್ಧೆ ನಡೆಯುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬೀಳಿಸುವ ಕೆಲಸ ಮಾಡುವುದಿಲ್ಲ. ಅವರ ನಡುವಿನ ಕುರ್ಚಿಯ ಕಿತ್ತಾಟದಿಂದಲೇ ಸರ್ಕಾರ ಪತನವಾಗಲಿದೆ. ಲೋಕಸಭೆ ಚುನಾವಣೆಯಲ್ಲಾದ ಸೋಲಿನ ನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಜನರಿಗೆ ನಿಯತ್ತಿಲ್ಲ’ ಎಂದು ನಿಂದಿಸುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
‘ರಾಜಭವನ ಎಂದರೆ ಬಿಜೆಪಿ ಕಚೇರಿ ಎನ್ನುವುದು ಹಳಸಿದ ಮಾತು. ರಾಜ್ಯಪಾಲರು ಮಸೂದೆ ವಾಪಸ್ ಕಳುಹಿಸಿದಾಗ ಸ್ಪಷ್ಟೀಕರಣ ಕೊಟ್ಟು ಮನವರಿಕೆ ಮಾಡುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು. ಮಸೂದೆಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರ ರಾಜ್ಯಪಾಲರಿಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.