ADVERTISEMENT

Muslim Reservation Bill | ಮುಸ್ಲಿಂ ಮೀಸಲು: ಮಸೂದೆ ಮತ್ತೆ ವಾಪಸ್

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
   

ಬೆಂಗಳೂರು: ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೂಪಿಸಿದ್ದ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ’ ಮಸೂದೆಯನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾದಿರಿಸಿ ಎರಡನೇ ಬಾರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.

ವಿಧಾನ ಮಂಡಲದ ಎರಡೂ ಸದನಗಳು ಅಂಗೀಕರಿಸಿದ್ದ ಈ ಮಸೂದೆಯನ್ನು ಏಪ್ರಿಲ್‌ 1ರಂದು ರಾಜ್ಯಪಾಲರ ಅಂಕಿತಕ್ಕೆ ಸರ್ಕಾರ ಕಳುಹಿಸಿತ್ತು. ಆರು ಪುಟಗಳ ಪತ್ರದೊಂದಿಗೆ ಕಡತವನ್ನು ಏಪ್ರಿಲ್‌ 15ರಂದು ಹಿಂದಿರುಗಿಸಿದ್ದ ರಾಜ್ಯಪಾಲರು, ‘ಧರ್ಮಾಧಾರಿತ ಮೀಸಲಾತಿಗೆ ದೇಶದ ಸಂವಿಧಾನದಲ್ಲಿ ಅವಕಾಶ ಇಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ, ‘ಸಾಂವಿಧಾನಿಕ ತೊಡಕು ಮತ್ತು ನಿರ್ಬಂಧಗಳಿರುವುದರಿಂದ ಪ್ರಸ್ತಾಪಿತ ಮಸೂದೆಗೆ ಅಂಕಿತ ಹಾಕುವ ಬದಲು, ರಾಷ್ಟ್ರಪತಿಯ ಪರಿಶೀಲನೆಗೆ ಬಿಡುವುದು ಸೂಕ್ತವೆಂದು ಭಾವಿಸಿದ್ದೇನೆ’ ಎಂದೂ ಪ್ರತಿಪಾದಿಸಿದ್ದರು.

ಕೇಂದ್ರಕ್ಕೆ ವ್ಯತಿರಿಕ್ತವಾಗಿರದ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಕಾಯ್ದೆಗಳ ತಿದ್ದುಪಡಿಗೆ ರೂಪಿಸಿದ ಮಸೂದೆಗಳನ್ನು ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸುವ ಅಗತ್ಯ ಇಲ್ಲವೆಂದು ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಈ ಪ್ರಕರಣವನ್ನು ಉಲ್ಲೇಖಿಸಿ, ಕೆಟಿಪಿಪಿ ತಿದ್ದುಪಡಿ ಮಸೂದೆಗೆ ಅಂಕಿತ ಹಾಕುವಂತೆ ಸರ್ಕಾರವು ರಾಜ್ಯಪಾಲರಿಗೆ ಕಡತವನ್ನು ಎರಡನೇ ಬಾರಿಗೆ ಕಳುಹಿಸಿತ್ತು.

ADVERTISEMENT

ಎರಡನೇ ಬಾರಿಗೆ ಮಸೂದೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿರುವ ಕಡತದಲ್ಲಿ, ಮೊದಲ ಬಾರಿ ವಾಪಸ್‌ ಕಳುಹಿಸಿದ್ದ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಮತ್ತೊಮ್ಮೆ ಪುನರಾವರ್ತಿಸಿರುವ ರಾಜ್ಯಪಾಲರು, ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿದ್ದಾರೆ.

‘ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಂದರ್ಭದಲ್ಲಿ, ರಾಷ್ಟ್ರಪತಿ ಮಾತ್ರ ನಿರ್ಧಾರ ಕೈಗೊಳ್ಳಬಹುದೆಂದೂ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ, ಸಾಂವಿಧಾನಿಕ ನ್ಯಾಯಾಲಯಗಳಿಂದ ಅಭಿಪ್ರಾಯ ಪಡೆಯಲು ಕಾನೂನಿನಲ್ಲಿ ಯಾವುದೇ ರೀತಿಯ ಅಧಿಕಾರ ಇಲ್ಲ. ಈ ಮಸೂದೆಯು ಸಾಂವಿಧಾನಿಕ ಅಂಶಗಳನ್ನು ಹೊಂದಿರುವುದರಿಂದ, ಕಾನೂನು ಪ್ರಕಾರ ಮರು ಪರಿಶೀಲಿಸಲು ನನಗೆ ಕಷ್ಟವಾಗುತ್ತಿದೆ. ಹೀಗಾಗಿ, ರಾಷ್ಟ್ರಪತಿಯ ಪರಿಶೀಲನೆಗೆ ಮಸೂದೆಯನ್ನು ಕಾದಿರಿಸಿದ್ದೇನೆ’ ಎಂದೂ ರಾಜ್ಯಪಾಲರೂ ಉಲ್ಲೇಖಿಸಿದ್ದಾರೆ.

‘ಅಲ್ಲದೆ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ನ್ಯಾಯಾಲಯದಲ್ಲಿರುವ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲವೆಂದೂ ಭಾವಿಸಿದ್ದೇನೆ. ಈ ಕಾರಣಕ್ಕೆ ಮಸೂದೆಗೆ ಅಂಕಿತ ಹಾಕದೆ ರಾಷ್ಟ್ರಪತಿಗೆ ಪರಿಶೀಲನೆಗೆ ಬಿಡಲು ನಿರ್ಬಂಧಿತನಾಗಿದ್ದೇನೆ’ ಎಂದೂ ಅವರು ರಾಜ್ಯಪಾಲರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.