ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ (ಪ್ರವರ್ಗ 2ಬಿ) ಶೇ 4 ಮೀಸಲಾತಿ ಕಲ್ಪಿಸಿರುವ ವಿಚಾರವು ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಕೆಲ ಹೊತ್ತು ಮಾತಿನ ಜಟಾಪಟಿಗೆ ಕಾರಣವಾಯಿತು.
ಸೋಮವಾರ ಬೆಳಿಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಧರ್ಮಾಧಾರಿತವಾಗಿ ಮೀಸಲಾತಿ ನೀಡಲು ನಿರ್ಧರಿಸಿರುವ ಸರ್ಕಾರದ ಕ್ರಮ ಸಂವಿಧಾನಬಾಹಿರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ವಿರೋಧ ಪಕ್ಷದ ನಾಯಕರಾದವರು ಸದನವನ್ನು ತಪ್ಪು ದಾರಿಗೆ ಎಳೆಯಬಾರದು. ಸಂವಿಧಾನದ ಅನುಸಾರವೇ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಇದು ಧಾರ್ಮಿಕ ಮೀಸಲಾತಿ ಅಲ್ಲ. ತೆರಿಗೆ ಪಾವತಿಸುತ್ತಿರುವ ದೇಶದಲ್ಲಿ 140 ಕೋಟಿ ಜನರಿಗೂ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ. ದ್ವೇಷ ಭಾವನೆ ಬಿತ್ತುವ ಪದಗಳನ್ನು ಕಡತದಿಂದ ತೆಗೆಯಬೇಕು’ ಎಂದು ಆಗ್ರಹಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ‘ಸಂವಿಧಾನದಡಿ ಧಾರ್ಮಿಕ ಮೀಸಲಾತಿ ಸಲ್ಲದು. ಹಿಂದುಳಿದ ವರ್ಗದಡಿ (ಒಬಿಸಿ) ಸೌಲಭ್ಯಗಳನ್ನು ನೀಡಲು ನಮ್ಮ ತಕರಾರಿಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಕಾನೂನು ಒಪ್ಪಲ್ಲ’ ಎಂದರು.
ನಾರಾಯಣಸ್ವಾಮಿ ಮಾತಿಗೆ ದನಿಗೂಡಿಸಿದ ಬಿಜೆಪಿಯ ಸಿ.ಟಿ. ರವಿ, ‘ಧರ್ಮದ ಆಧಾರದಲ್ಲಿ ನೀಡಿದ್ದ ಮೀಸಲಾತಿ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮತೀಯ ಆಧಾರದ ಮೀಸಲಾತಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಕೂಡ ತಿರಸ್ಕರಿಸಿದ್ದರು’ ಎಂದರು.
ಆಗ ಬಿ.ಕೆ. ಹರಿಪ್ರಸಾದ್, ‘ಈ ಬಗ್ಗೆ ವಿಸ್ತೃತ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡಬೇಕು’ ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರನ್ನು ಕೋರಿದರು. ಸಮ್ಮತಿಸಿದ ಉಪ ಸಭಾಪತಿ, ‘ನೋಟಿಸ್ ನೀಡಿದರೆ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ವಾಗ್ವಾದಕ್ಕೆ ತೆರೆ ಎಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.