ADVERTISEMENT

ಅಭ್ಯರ್ಥಿಗಿಂತ ಸಿದ್ದರಾಮಯ್ಯಗೇ ಅಗ್ನಿಪರೀಕ್ಷೆ

ಮೈಸೂರು–ಕೊಡಗು: ಪಟ್ಟುಹಿಡಿದು ದಕ್ಕಿಸಿಕೊಂಡಿರುವ ಕ್ಷೇತ್ರದಲ್ಲಿ ಪ್ರತಿಷ್ಠೆಯ ಜಿದ್ದಾಜಿದ್ದಿ

ಕೆ.ಓಂಕಾರ ಮೂರ್ತಿ
Published 3 ಮೇ 2019, 17:44 IST
Last Updated 3 ಮೇ 2019, 17:44 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವು ಕಾಂಗ್ರೆಸ್‌ ಅಭ್ಯರ್ಥಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಪಾಲಿಗೆ ಅಗ್ನಿಪರೀಕ್ಷೆಯಂತಾಗಿದೆ.

ಹಾಲಿ ಸಂಸದರನ್ನೇ ಹೊಂದಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಕರ್ಮಭೂಮಿ ಮೈಸೂರು ಕ್ಷೇತ್ರವನ್ನು ಪಟ್ಟು ಹಿಡಿದು ಪಕ್ಷಕ್ಕೆ ಉಳಿಸಿಕೊಂಡು ಪ್ರತಿಷ್ಠೆ ಹಾಗೂ ಸವಾಲಾಗಿ ಸ್ವೀಕರಿಸಿದ್ದಾರೆ. ಹೀಗಾಗಿ, ಉಳಿದೆಲ್ಲಾ ಕ್ಷೇತ್ರಗಳಿಗಿಂತ ಅವರ ಪಾಲಿಗಿದು ಮಹತ್ವ ಪಡೆದುಕೊಂಡಿದೆ.

ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟಕೊಡುವ ಸಂಬಂಧ ಚರ್ಚೆ ನಡೆದಾಗ, ‘ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದೇನೆ. ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ನನ್ನನ್ನು ಮೈಸೂರಿನಿಂದ ಗಡಿಪಾರು ಮಾಡಬೇಕೆಂದಿದ್ದೀರಾ’ ಎಂದು ಪಕ್ಷದ ವರಿಷ್ಠರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ADVERTISEMENT

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸೋಲಿನಿಂದ ಹತಾಶರಾಗಿದ್ದ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲಲ್ಲೇಬೇಕು ಎಂಬ ಹಟದಲ್ಲಿ ಸರಣಿ ಸಭೆ ನಡೆಸಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ತಮ್ಮ ಸಮುದಾಯದವರೇ ಆದ ಸಿ.ಎಚ್‌.ವಿಜಯಶಂಕರ್‌ ಅವರನ್ನು ಪಕ್ಷದ ಅಭ್ಯರ್ಥಿಯಾಗಿಸಿ ಪ್ರಚಾರಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುವುದಾಗಿ ಹೇಳಿದ್ದಾರೆ.

ನಾಮಪತ್ರ ಸಲ್ಲಿಸುವ ದಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಬಲ ತುಂಬಿದ್ದಾರೆ. ಬಹಳ ದಿನಗಳಿಂದ ದೂರ ಉಳಿದಿದ್ದ ಆಪ್ತ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರದ ಮುಂಚೂಣಿಯಲ್ಲಿ ನಿಲ್ಲಿಸಿದ್ದಾರೆ.

‘ಕ್ಷೇತ್ರದಲ್ಲಿ ಅಕಸ್ಮಾತ್‌ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಗೆದ್ದರೆ ಚಾಮಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಂಡಂತಾಗುತ್ತದೆ. ಜೊತೆಗೆ ಪಕ್ಷದಲ್ಲಿ ಮತ್ತಷ್ಟು ಬಲ ಹೆಚ್ಚಲಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ವಿಶ್ಲೇಷಿಸುತ್ತಾರೆ.

ಮೈಸೂರು ಕ್ಷೇತ್ರವನ್ನು ಒಲಿಸಿಕೊಳ್ಳಲು ಸಚಿವ ಜಿ.ಟಿ.ದೇವೇಗೌಡ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ‘ದೊಡ್ಡ ಗೌಡರ’ ಸ್ಪರ್ಧೆ ವಿಚಾರವನ್ನೇ ಮುಂದಿಟ್ಟಿದ್ದರು. ಸಿದ್ದರಾಮಯ್ಯ ಹಟದ ಮುಂದೆ ಜಿಟಿಡಿ ಕೈಚೆಲ್ಲಬೇಕಾಯಿತು. ಹೀಗಾಗಿ, ಜೆಡಿಎಸ್‌ನಿಂದ ಸಹಕಾರ ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಇದುವರೆಗೆ ಚುನಾವಣಾ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ನಾಮಪತ್ರ ಸಲ್ಲಿಕೆ ದಿನವೂ ದೂರ ಉಳಿದಿದ್ದರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಕೂಡ ಅಂತರ ಕಾಯ್ದುಕೊಂಡಿದ್ದಾರೆ.

2018ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ ಮೇಲೆ ವಾಗ್ದಾಳಿ ನಡೆಸುತ್ತಾ ಸಿದ್ದರಾಮಯ್ಯ ಪ್ರಚಾರ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರ ವಿರುದ್ಧ ಜಿ.ಟಿ.ದೇವೇಗೌಡ, ವಿಶ್ವನಾಥ್‌, ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್‌ ಒಟ್ಟಾಗಿ ಮುಗಿಬಿದ್ದಿದ್ದರು.

ಮೈಸೂರು ಲೋಕಸಭಾ ಅಖಾಡ ವ್ಯಾಪ್ತಿಯ ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಈ ಮೂವರೂ ಶಾಸಕರು ಇದುವರೆಗೂ ಪ್ರಚಾರದಲ್ಲಿ ಕೈಜೋಡಿಸಿಲ್ಲ.

‘ಹಲವಾರು ವರ್ಷಗಳಿಂದ ಕಾಂಗ್ರೆಸ್‌– ಜೆಡಿಎಸ್‌ ಪರಸ್ಪರ ಎದುರಾಳಿಯಾಗಿ ಹೋರಾಟ ನಡೆಸಿದ್ದು ನಿಜ. ಇದೇ ವಿಚಾರವನ್ನು ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ವೈಯಕ್ತಿಕ ವಿಷಯಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ’ ಎನ್ನುತ್ತಾರೆ ಡಾ.ಎಚ್‌.ಸಿ.ಮಹದೇವಪ್ಪ.

* ಮೈಸೂರು ಕ್ಷೇತ್ರದಲ್ಲಿ ನಮ್ಮ ಎದುರಾಳಿ ವಿಜಯಶಂಕರ್‌ ಅಲ್ಲ; ಸಿದ್ದರಾಮಯ್ಯ. ಅವರ ಅಹಂ ಮಣಿಸುವುದೇ ನಮ್ಮ ಗುರಿ

- ಗೋ. ಮಧುಸೂದನ್‌, ಬಿಜೆಪಿ ವಕ್ತಾರ

*ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ನಂಬಿಕೆ, ವಿಶ್ವಾಸ ಇಟ್ಟುಕೊಂಡು ಒಟ್ಟಾಗಿ ಪ್ರಚಾರ ನಡೆಸಬೇಕು

- ಸಾ.ರಾ.ಮಹೇಶ್‌, ಜೆಡಿಎಸ್‌ ಮುಖಂಡ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.