ADVERTISEMENT

ಎಂಎಂಎಲ್‌ಗೆ ₹ 642.32 ಕೋಟಿ ನಷ್ಟ: ಅಧಿಕಾರಿಗಳಿಗೆ ಕ್ಲೀನ್‌ ಚಿಟ್‌

ಆರೋಪ ಸಾಬೀತಿಗೆ ಸಾಕ್ಷ್ಯಗಳಿಲ್ಲ

ರಾಜೇಶ್ ರೈ ಚಟ್ಲ
Published 16 ಮೇ 2019, 19:51 IST
Last Updated 16 ಮೇ 2019, 19:51 IST
ವಿ.ಉಮೇಶ್‌ (ನಿವೃತ್ತ) ಮತ್ತು ಮಹೇಂದ್ರ ಜೈನ್‌
ವಿ.ಉಮೇಶ್‌ (ನಿವೃತ್ತ) ಮತ್ತು ಮಹೇಂದ್ರ ಜೈನ್‌   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ಗೆ (ಎಂಎಂಎಲ್‌) ₹ 642.32 ಕೋಟಿ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳಾದ ವಿ.ಉಮೇಶ್‌ (ನಿವೃತ್ತ) ಮತ್ತು ಮಹೇಂದ್ರ ಜೈನ್‌ ಅವರಿಗೆ ರಾಜ್ಯ ಸರ್ಕಾರ ಕ್ಲೀನ್‌ ಚಿಟ್‌ ನೀಡಿದೆ.

‘ಎಂಎಂಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಈ ಇಬ್ಬರ ವಿರುದ್ಧ ಮಾಡಿರುವ ಆರೋಪಗಳು ಮತ್ತು ನಷ್ಟ ಉಂಟು ಮಾಡಿರುವ ಬಗ್ಗೆ ಸಾಬೀತುಪಡಿಸಲು ಸಾಕ್ಷ್ಯಗಳಿಲ್ಲ. ಹೀಗಾಗಿ, ಈ ಅಧಿಕಾರಿಗಳ ವಿರುದ್ಧದ ಎಲ್ಲ ಆರೋಪಗಳನ್ನು ಕೈ ಬಿಡಬಹುದು’ ಎಂದು ಎಂಎಂಎಲ್‌ನ ಆಡಳಿತ ಇಲಾಖೆಯಾದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ನೀಡಿದೆ.

ಇಲಾಖೆ ನೀಡಿರುವ ಅಭಿಪ್ರಾಯದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ಅಭಿಪ್ರಾಯವನ್ನು ಒಪ್ಪಿ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿರಲು ಮತ್ತು ಎಂಎಂಎಲ್‌ಗೆ ಆಗಿರುವ ನಷ್ಟವನ್ನು ಅಧಿಕಾರಿಗಳಿಂದ ವಸೂಲು ಮಾಡದಿರಲು ಇದೇ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ADVERTISEMENT

‘ಈ ಅಧಿಕಾರಿಗಳ ಅವಧಿಯಲ್ಲಿ ಎಂಎಂಎಲ್‌ ಕಂಪನಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿತ್ತು. ನೌಕರರಿಗೆ ಕಡ್ಡಾಯವಾಗಿ ಪಾವತಿಸಿಬೇಕಿದ್ದ ಇಎಸ್ಐ, ಪಿಎಫ್‌, ರಾಯಲ್ಟಿ ಸಮಯಕ್ಕೆ ‌ಸರಿಯಾಗಿ ಪಾವತಿಸದ ಕಾರಣಕ್ಕೆ ನ್ಯಾಯಾಲಯ ಛೀಮಾರಿ ಹಾಕಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕಂಪನಿಯ ಖರ್ಚುಗಳನ್ನು ಕಡಿಮೆ ಮಾಡಿ ಲಾಭ ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳಲು ನಿಶ್ಚಯಿಸಲಾಗಿತ್ತು’

’ಹೀಗಾಗಿ, ಆ ಅವಧಿಯಲ್ಲಿ ಆಗಿರುವ ಆರ್ಥಿಕ ನಷ್ಟ ಮತ್ತು ಮಾಡಿರುವ ಆರೋಪಗಳನ್ನು ಅವರ ಮೇಲೆ ಹೊರಿಸಲು ಸಾಧ್ಯವಿಲ್ಲ’ ಎಂದು ವಾಣಿಜ್ಯ ಇಲಾಖೆಗೆ ಎಂಎಂಎಲ್‌ ವರದಿ ನೀಡಿತ್ತು. ಈ ಅಭಿಪ್ರಾಯವನ್ನು ಒಪ್ಪಬಹುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ: 1999ರಿಂದ 2008ರ ಮಧ್ಯೆ ಎಂಎಂಎಲ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಆರು ಐಎಎಸ್‌ (ವಿ. ಉಮೇಶ್, ಐ.ಆರ್‌. ಪೆರುಮಾಳ್‌, ಕೆ.ಎಸ್‌. ಮಂಜುನಾಥ್‌, ಡಿ.ಎಸ್‌. ಅಶ್ವಥ್‌, ಮಹೇಂದ್ರ ಜೈನ್‌, ಜಿ.ವಿ. ಕೊಂಗವಾಡ) ಮತ್ತು ಒಬ್ಬ ಐಪಿಎಸ್‌ (ಜೀಜಾ ಮಾಧವನ್‌ ಹರಿಸಿಂಗ್) ಅಧಿಕಾರಿಗಳ ಅವಧಿಯಲ್ಲಿ ಒಟ್ಟು ₹ 642.32 ಕೋಟಿ ನಷ್ಟ ಆಗಿದೆ ಎಂದು ಲೋಕಾಯುಕ್ತ 2008ರ ಡಿ. 18ರಂದು ವರದಿ (ಭಾಗ–1) ಸಲ್ಲಿಸಿತ್ತು.

ಕಬ್ಬಿಣದ ಅದಿರು ಉತ್ಪಾದಿಸಲು ಮತ್ತು ಅದನ್ನು ಮಾರಾಟ ಮಾಡಲು ದೋಷಪೂರಿತ ಒಪ್ಪಂದ ಮಾಡಿಕೊಂಡು, ಕಾಲಕಾಲಕ್ಕೆ ಒಪ್ಪಂದದ ಉಪಬಂಧಗಳನ್ನು ಪಾಲಿಸದೇ ಇದ್ದುದರಿಂದ ಈ ನಷ್ಟ ಉಂಟಾಗಿದೆ. ಅಲ್ಲದೆ, ಖನಿಜ ಮತ್ತು ಲೋಹ ಮಾರಾಟ ನಿಗಮ (ಎಂಎಂಟಿಸಿ) ನಿಗದಿಪಡಿಸಿದ್ದಕ್ಕಿಂತಲೂ ಕಡಿಮೆ ದರಕ್ಕೆ ಅದಿರು ಮಾರಾಟ ಮಾಡಿದ್ದರಿಂದಲೂ ಭಾರಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಸರ್ಕಾರ, ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಜೊತೆಗೆ, ಅವರಿಂದ ಆಗಿರುವ ನಷ್ಟವನ್ನು ವಸೂಲಿ ಮಾಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಅಧಿಕಾರಿಗಳ ಪೈಕಿ, ಮಹೇಂದ್ರ ಜೈನ್‌ ಹೊರತುಪಡಿಸಿ ಉಳಿದವರು ನಿವೃತ್ತರಾಗಿದ್ದಾರೆ.

ಲೋಕಾಯುಕ್ತದ ಆರೋಪಗಳಿಗೆ ಉತ್ತರಿಸಿದ್ದ ಅಧಿಕಾರಿಗಳು, ‘ನಮ್ಮ ಅವಧಿಯಲ್ಲಿ ಎಂಎಂಎಲ್‌ಗೆ ಯಾವುದೇ ನಷ್ಟ ಉಂಟು ಮಾಡಿಲ್ಲ. ಅದಿರು ಮಾರಾಟ ಒಪ್ಪಂದಗಳಿಂದ ಸಂಸ್ಥೆಗೆ ಲಾಭ ಆಗಿದೆ’ ಎಂದು ವಿವರಣೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮರುಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ 2014ರ ಜ. 4ರಂದು ಡಿಪಿಎಆರ್ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಕಾರ್ಯದರ್ಶಿ, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ, ಗಣಿ ಹಾಗೂ ಭೂವಿಜ್ಞಾನ ಇಲಾಖೆ ಹಾಗೂ ಎಂಎಂಎಲ್‌ ಅಧಿಕಾರಿಗಳು ಸಭೆ ನಡೆಸಿದ್ದರು.

ಆರೋಪಿತ ಅಧಿಕಾರಿಗಳು ಎತ್ತಿದ ವಾದ ಮತ್ತು ಲೋಕಾಯುಕ್ತ ವರದಿಯಲ್ಲಿದ್ದ ಕೆಲವು ಅಂಶಗಳ ಕುರಿತು ಸ್ಪಷ್ಟತೆ ಅಗತ್ಯ ಇದ್ದುದರಿಂದ ಬಗ್ಗೆ ಮರು ಪರಿಶೀಲಿಸುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಲು ಆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. 2014ರ ಮಾರ್ಚ್‌ 3ರಂದು ನಡೆದ ಸಚಿವ ಸಂಪುಟ ಸಭೆಯೂ ಅದಕ್ಕೆ ಒಪ್ಪಿತ್ತು.

ಆದರೆ, ಈ ಮನವಿಯನ್ನು ತಿರಸ್ಕರಿಸಿದ್ದ ಲೋಕಾಯುಕ್ತ, ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸೂಚಿಸಿ, 2014ರ ಜುಲೈ 4ರಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆದಿತ್ತು.ಆದರೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎರಡನೇ ಬಾರಿಗೆ ಲೋಕಾಯುಕ್ತ ಶಿಫಾರಸು ಮಾಡಿ
ದ್ದರೂ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲವೆಂದು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಪ್ರತಿಪಾದಿಸಿದೆ.

ಇತರರೂ ಶೀಘ್ರದಲ್ಲೇ ಆರೋಪ ಮುಕ್ತ?

‘ಐ.ಆರ್‌. ಪೆರುಮಾಳ್‌ ವಿರುದ್ಧದ ಆರೋಪಗಳನ್ನೂ ಸಾಬೀತುಪಡಿಸಲು ಸಾಕ್ಷ್ಯಗಳಿಲ್ಲ ಎಂದು ಈಗಾಗಲೇ ಎಂಎಂಎಲ್‌ ಅಭಿಪ್ರಾಯ ನೀಡಿದೆ. ಇತರ ನಾಲ್ವರು ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಎಂಎಂಎಲ್‌ ಇನ್ನಷ್ಟೆ ಅಭಿಪ್ರಾಯ ನೀಡಬೇಕಿದೆ. ಎಲ್ಲ ಅಧಿಕಾರಿಗಳ ಮೇಲಿನ ಆರೋಪಗಳನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆದರೆ, ಲೋಕಾಯುಕ್ತ ವರದಿಗೆ (ಭಾಗ1 ಮತ್ತು ಭಾಗ–2) ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.