ADVERTISEMENT

ಮೈಸೂರು ರಂಗಾಯಣ ನಿರ್ದೇಶಕರನ್ನು ವಜಾಗೊಳಿಸಿ

ರಂಗಭೂಮಿ, ಸಾಹಿತ್ಯ ವಲಯದ ಪ್ರಮುಖರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 17:11 IST
Last Updated 26 ಡಿಸೆಂಬರ್ 2021, 17:11 IST

ಬೆಂಗಳೂರು: ‘ಜನಸಂಸ್ಕೃತಿಯ ಪ್ರತೀಕವಾಗಿ ಉಳಿಯಬೇಕಿರುವ ರಂಗಾಯಣವನ್ನು ಕಲುಷಿತಗೊಳಿಸಿ, ಬಲಪಂಥೀಯ ವಿಚಾರಗಳನ್ನು ಹೇರುತ್ತಿರುವ ಅಡ್ಡಂಡ ಸಿ. ಕಾರ್ಯಪ್ಪ ಅವರನ್ನು ಕೂಡಲೇ ವಜಾ ಮಾಡಬೇಕು’ ಎಂದುರಂಗಭೂಮಿ, ಸಾಹಿತ್ಯ ವಲಯದ ಪ್ರಮುಖರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮೈಸೂರು ರಂಗಾಯಣದಲ್ಲಿನ ವಿದ್ಯಮಾನಗಳ ಕುರಿತಂತೆ ಜಂಟಿ ಹೇಳಿಕೆ ನೀಡಿದ್ದು, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ಸಿ. ಬಸವಲಿಂಗಯ್ಯ, ಚಿದಂಬರ ರಾವ್ ಜಂಬೆ, ಎಚ್‌. ಜನಾರ್ದನ್, ಭಾಗೀರಥಿ ಬಾಯಿ ಕದಂ, ಪ್ರೊ.ಬಿ.ಕೆ. ಚಂದ್ರಶೇಖರ್, ಪ್ರೊ.ಆರ್.ಕೆ. ಹುಡ್ಗಿ, ಸಿ.ಕೆ. ಗುಂಡಣ್ಣ, ನಾ. ದಿವಾಕರ್, ನೀಲಾ ಕೆ., ಜೆ. ಲೋಕೇಶ್, ವಿಮಲಾ ಕೆ.ಎಸ್. ಸೇರಿದಂತೆ57 ಮಂದಿ ರಂಗಾಯಣ ಉಳಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

‘ರಂಗ ದಿಗ್ಗಜ ಬಿ.ವಿ.ಕಾರಂತರ ಕನಸಿನ ಕೂಸಾದ ರಂಗಾಯಣ, ತನ್ನದೆ ಆದ ಹಿರಿಮೆ ಹೊಂದಿದೆ. ಅವರನ್ನೂ ಒಳಗೊಂಡಂತೆ ಈವರೆಗೆ ನೇಮಕಗೊಂಡ ಯಾವ ನಿರ್ದೇಶಕರೂ ತಮ್ಮ ವೈಯಕ್ತಿಕ ನಂಬಿಕೆ, ಸಿದ್ಧಾಂತಗಳನ್ನು ರಂಗಾಯಣದ ಕಾರ್ಯಚಟುವಟಿಕೆಗಳ ಜೊತೆಗೆ ಬೆಸೆದಿರಲಿಲ್ಲ. ಆದರೆ, ಅಡ್ಡಂಡ ಕಾರ್ಯಪ್ಪ ಅವರು ನಿರ್ದೇಶಕರಾದಾಗಿನಿಂದಮೈಸೂರು ರಂಗಾಯಣವು ಒಂದಲ್ಲ ಒಂದು ಕಾರಣದಿಂದ ವಿವಾದದ ಕೇಂದ್ರವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ರಂಗಭೂಮಿಗೆ ಸಂಬಂಧವಿಲ್ಲದಚಕ್ರವರ್ತಿ ಸೂಲಿಬೆಲೆ ಮತ್ತು ಮಾಳವಿಕಾ ಅವರನ್ನು ಆಹ್ವಾನಿಸಲಾಯಿತು.ರಂಗಾಯಣವನ್ನು ಕೋಮುವಾದಿ ರಾಜಕೀಯಕ್ಕೆ ಬಳಸುವುದು ನಿರ್ದೇಶಕರ ಉದ್ದೇಶವಾಗಿತ್ತು. ಇದನ್ನು ಪ್ರಶ್ನಿಸಿದವರಿಗೆ ಉದ್ಧಟತನದ ಉತ್ತರ ಕೊಟ್ಟರು. ರಂಗಾಯಣದಲ್ಲಿ ಆರೆಸ್ಸೆಸ್‌ನ ಕಾರ್ಯಸೂಚಿಗಳ ಜಾರಿಗೆ ವಿರೋಧ ವ್ಯಕ್ತಪಡಿಸಿದವರನ್ನು ಸಾರ್ವಜನಿಕವಾಗಿ ನಿಂದಿಸತೊಡಗಿದರು. ಅಲ್ಲಿನ ಬೆಳವಣಿಗೆಗಳ ಬಗ್ಗೆ ಮೈಸೂರಿನ ರಂಗಕರ್ಮಿಗಳು ಸಿಡಿದೆದ್ದು, ಚಳವಳಿ ಹಮ್ಮಿಕೊಂಡಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದ್ದಾರೆ.

‘ಜಾತ್ಯತೀತತೆ ಹಾಗೂ ಧರ್ಮ ನಿರಪೇಕ್ಷತೆ ರಂಗಾಯಣದ ಆಶಯ. ರಂಗಭೂಮಿ ವಿಶ್ವ ಮಾನವ ತತ್ವದ ಆದರ್ಶ ಹೊಂದಿದೆ. ಅದನ್ನು ಅಲ್ಪ ಮಾನವತ್ವದೆಡೆಗೆ ಒಯ್ಯಬಾರದು. ಬಹುತ್ವ ಭಾರತವನ್ನು ಗೌರವಿಸುವುದು ಒಬ್ಬ ಯೋಗ್ಯ ರಂಗಕರ್ಮಿಯ ಹೊಣೆಗಾರಿಕೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಕಾರ್ಯಪ್ಪ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.