ADVERTISEMENT

ತಂದೆ ಕನಸುಗಳೇ ಸಾಧನೆಗೆ ಪ್ರೇರಣೆ: 16 ಚಿನ್ನದ ಪದಕ ವಿಜೇತ ಗಣೇಶ್‌ ಮನದಾಳ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:47 IST
Last Updated 23 ಮಾರ್ಚ್ 2022, 19:47 IST
ಡಿ.ಗಣೇಶ್‌ ನಾಡಿಗ
ಡಿ.ಗಣೇಶ್‌ ನಾಡಿಗ   

‌ಮೈಸೂರು: ‘ಶಿಕ್ಷಣದ ವಿಷಯದಲ್ಲಿ ನನ್ನ ಮೇಲೆ ತಂದೆಗೆ ಅಪಾರ ಭರವಸೆ. ನನ್ನನ್ನೇ ಆಸ್ತಿ ಮಾಡಿಕೊಂಡು ಕನಸು ಕಟ್ಟಿಕೊಂಡಿದ್ದಾರೆ. ಯಾವುದಕ್ಕೂ ರಾಜಿ ಮಾಡಿಕೊಳ್ಳದೆ ಓದಿಸಿದ್ದಾರೆ. ಅವರ ಕನಸುಗಳೇ ನನ್ನ ಈಗಿನ ಸಾಧನೆಗೆ ಪ್ರೇರಣೆ’ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎಂ.ಟೆಕ್‌ನಲ್ಲಿ (ನಗರ ಹಾಗೂ ಪ್ರಾದೇಶಿಕ ಯೋಜನೆ) 16 ಚಿನ್ನದ ಪದಕಗಳಿಗೆ ಭಾಜನರಾದ ಡಿ.ಗಣೇಶ್ ನಾಡಿಗ ಅವರ ಕೃತಜ್ಞತೆಯ ನುಡಿಗಳಿವು.

ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವನಹಳ್ಳಿಯ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜಿಲ್ಲಿ ಬಿ.ಇ (ಸಿವಿಲ್‌) ಪೂರೈಸಿದ್ದಾರೆ. ‘ಪರೀಕ್ಷೆಗೆ ಸಜ್ಜಾಗುವಾಗ ಅಮ್ಮ ತನುಜಾ ಕೈತುತ್ತು ನೀಡುತ್ತಿದ್ದರು. ನನಗೆ ಒಲಿದಿರುವ ಪದಕಗಳನ್ನು ತಂದೆ, ತಾಯಿ ಹಾಗೂ ಶಿಕ್ಷಕರಿಗೆ ಅರ್ಪಿಸುತ್ತೇನೆ’ ಎಂದರು.

ಬೆಂಗಳೂರಿನ ಕಂಪನಿಯೊಂದರಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಅವರು ನಗರ ಯೋಜನೆ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದಾರೆ. ‘ಸಾರಿಗೆ ಮತ್ತು ಸಂಚಾರ ಯೋಜನೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವುದು ಟ್ರಾಫಿಕ್‌ ಪೊಲೀಸರ ಕೆಲಸವಾಗಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವ ಅವರಿಗೆ ಟ್ರಾಫಿಕ್‌ ಸಮಸ್ಯೆಯ ಒತ್ತಡ ಹೇರಬಾರದು. ಅದಕ್ಕೆ ನಗರ ಯೋಜನೆ ಎಂಜಿನಿಯರ್‌ಗಳು ಪರಿಹಾರ ದೊರಕಿಸಿ ಕೊಡಬೇಕು’ ಎಂದರು.

ADVERTISEMENT

ತಂದೆ ಹಾದಿಯಲ್ಲಿ ಹೆಜ್ಜೆ…
ತಂದೆ ಧನಂಜಯ ರೆಡ್ಡಿ ಹಾದಿಯಲ್ಲಿ ಗಣೇಶ್ ಹೆಜ್ಜೆ ಇಡುತ್ತಿದ್ದಾರೆ. ತಂದೆ ಮೈಸೂರಿನ ಎನ್‌ಐಇ ಕಾಲೇಜಿನಲ್ಲಿ ಬಿ.ಇ (ಸಿವಿಲ್‌) ಪದವಿಯಲ್ಲಿ ರ‍್ಯಾಂಕ್‌ ಪಡೆದಿದ್ದರು. ಮೈಸೂರು ವಿ.ವಿಯಲ್ಲಿ ಎಂ.ಟೆಕ್‌ (ನಗರ ಹಾಗೂ ಪ್ರಾದೇಶಿಕ ಯೋಜನೆ) ಪೂರೈಸಿದ್ದರು. ಗಣೇಶ್‌ ಈಗ ಎಂ.ಟೆಕ್‌ನಲ್ಲಿ ರ‍್ಯಾಂಕ್‌ ಪಡೆದಿದ್ದಾರೆ.

*

ಕೊರೊನಾ ಸೋಂಕಿನಿಂದ 1ತಿಂಗಳು ಮನೆಯಲ್ಲೇ ಐಸೋಲೇಟ್‌ ಆಗಿದ್ದೆ. ಆ ಸಮಯದಲ್ಲಿ ಅಧ್ಯಯನ ಮಾಹಿತಿ ಕಲೆ ಹಾಕಲು ಕಷ್ಟವಾಯಿತು.
-ಡಿ.ಗಣೇಶ್ ನಾಡಿಗ, ರ‍್ಯಾಂಕ್ ವಿಜೇತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.