ADVERTISEMENT

ದಸರಾ ಉದ್ಘಾಟನೆ | ಬಾನು ಮುಷ್ತಾಕ್‌ ಆಯ್ಕೆ ಸೂಕ್ತವಾಗಿದೆ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 8:32 IST
Last Updated 31 ಆಗಸ್ಟ್ 2025, 8:32 IST
   

ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲು ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸೂಕ್ತವಾಗಿದೆ. ಇದನ್ನು ವಿರೋಧಿಸುತ್ತಿರುವವರು ಡೋಂಗಿಗಳು, ಧರ್ಮಾಂಧರು ಹಾಗೂ ಇತಿಹಾಸದ ಅರಿವಿಲ್ಲದವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸಕ್ಕೆಂದು ಭಾನುವಾರ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಉದ್ಘಾಟಕರ ಆಯ್ಕೆ ಅಧಿಕಾರವನ್ನು ಉನ್ನತ ಮಟ್ಟದ ಸಮಿತಿ ನನಗೆ ಕೊಟ್ಟಿತ್ತು. ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಅವರನ್ನು ನಾನು ಆಯ್ಕೆ ಮಾಡಿದ್ದೇನೆ. ಹಿಂದೆ ಮುಸ್ಲಿಮರೇ ಆದ ಕವಿ ಕೆ.ಎಸ್.ನಿಸಾರ್ ಅಹಮದ್‌ ಉದ್ಘಾಟಿಸಿದ್ದರು. ದಸರಾ ನಾಡಹಬ್ಬ ಹಾಗೂ ಸಾಂಸ್ಕೃತಿಕ ಹಬ್ಬ. ಇದನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕು ಎಂದೇನಿಲ್ಲ. ಹಿಂದೆ ಮಹಾರಾಜರ ಆಳ್ವಿಕೆ ಇಲ್ಲದಿರುವಾಗ ಹೈದರ್‌ ಆಲಿ, ಟಿಪ್ಪು ಸುಲ್ತಾನ್‌ ನಡೆಸಿರಲಿಲ್ಲವೇ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದಾದ ವಿಜೃಂಭಣೆಯಿಂದ ಮಾಡುತ್ತಿರಲಿಲ್ಲವೇ? ಇದು ಧರ್ಮಾತೀತ, ಜಾತ್ಯತೀತವಾದ ಹಬ್ಬ. ಎಲ್ಲ ಧರ್ಮದವರೂ ಆಚರಿಸುತ್ತಾರೆ‌’ ಎಂದು ಪ್ರತಿಪಾದಿಸಿದರು.

ADVERTISEMENT

‘ಕರ್ನಾಟಕದಲ್ಲಿ ಬೂಕರ್‌ ಪ್ರಶಸ್ತಿ ಪುರಸ್ಕೃತರು ಬಹಳ ಕಡಿಮೆ. ಹೀಗಾಗಿ, ಬಾನು ಅವರಿಗೆ ಅವಕಾಶ ಕೊಟ್ಟಿದ್ದೇವೆ. ಇದನ್ನು ಕೆಲವು ಧರ್ಮಾಂಧರು ಮಾತ್ರ ವಿರೋಧಿಸುತ್ತಿದ್ದಾರೆ. ಅಂಥವರು ಇತಿಹಾಸ ತಿಳಿದುಕೊಳ್ಳಲಿ’ ಎಂದು ‍ಪ್ರತಿಕ್ರಿಯಿಸಿದರು.

‘ಬಾನು ಅವರು ಹಿಂದೆ ಮಾಡಿದ್ದ ಭಾಷಣಕ್ಕೂ– ಈಗ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೂ ಏನು ಸಂಬಂಧ? ಕನ್ನಡಾಂಬೆಯ ಬಗ್ಗೆ ಗೌರವವಿಲ್ಲದೇ ಕನ್ನಡದಲ್ಲಿ ಬರೆಯುತ್ತಿದ್ದಾರೆಯೇ? ಅವರು ಸಾಹಿತ್ಯ ರಚಿಸಿರುವುದು ಕನ್ನಡದಲ್ಲಿಯೇ ಅಲ್ಲವೇ? ‘ಎದೆಯ ಹಣತೆ’ ಯಾವ ಭಾಷೆಯಲ್ಲಿದೆ? ಕನ್ನಡದ ಬಗ್ಗೆ ಗೌರವ, ಅಭಿಮಾನ, ಪ್ರೀತಿ ಇಲ್ಲದಿದ್ದರೆ ಕನ್ನಡದಲ್ಲಿ ಬರೆಯಲು ಸಾಧ್ಯವೇ?’ ಎಂದು ಕೇಳಿದರು.

‘ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆ, ಕುಂಟು ನೆಪ ಹುಡುಕುತ್ತಿದ್ದಾರೆ’ ಎಂದು ಟೀಕಿಸಿದರು.

‘ದನದ ಮಾಂಸ ತಿಂದು ಬಂದು ದಸರಾ ಉದ್ಘಾಟಿಸಿ ಬಿಡುತ್ತಾರೇನೋ? ಎಂಬಂತಹ ಹೇಳಿಕೆಗಳನ್ನು ಡೋಂಗಿಗಳಷ್ಟೆ ನೀಡಲು ಸಾಧ್ಯ. ರಾಜಕೀಯಕ್ಕಾಗಿ ಮಾತನಾಡುವವರಿಗೆ ಉತ್ತರ ಕೊಡುವುದಿಲ್ಲ’ ಎಂದರು.

‘ಬೂಕರ್ ಪ್ರಶಸ್ತಿ ಹಂಚಿಕೊಂಡಿರುವ ಅನುವಾದಕಿ ದೀಪಾ ಭಾಸ್ತಿ ಅವರನ್ನೂ ಉದ್ಘಾಟನೆಗೆ ಆಹ್ವಾನಿಸಬೇಕಿತ್ತು’ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ದಸರೆಯನ್ನು ಇಬ್ಬರು ಉದ್ಘಾಟಿಸಲು ಆಗುತ್ತದೆಯೇ? ನಮ್ಮ ಸರ್ಕಾರ ಈಗಾಗಲೇ ಇಬ್ಬರಿಗೂ ತಲಾ ₹ 10 ಲಕ್ಷ ನೀಡಿ ಗೌರವ ಸಲ್ಲಿಸಿದೆ’ ಎಂದು ಹೇಳಿದರು.

ಸಚಿವರಾದ ಕೆ.ವೆಂಕಟೇಶ್, ಜಮೀರ್ ಅಹಮದ್ ಖಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಮುಖಂಡ ಅಜೀಜ್‌ಉಲ್ಲಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.