ADVERTISEMENT

ಗೃಹ ಸಚಿವರ ಹೇಳಿಕೆ ಸತ್ಯ, ಪೊಲೀಸ್ ಕಮಿಷನರ್ ಹೇಳಿಕೆ ಸುಳ್ಳು– ಎನ್‌. ರವಿಕುಮಾರ್ 

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 8:50 IST
Last Updated 9 ಏಪ್ರಿಲ್ 2022, 8:50 IST
ಎನ್ ರವಿಕುಮಾರ್
ಎನ್ ರವಿಕುಮಾರ್   

ಬೆಂಗಳೂರು: ‘ಜೆಜೆ ನಗರದಲ್ಲಿ ನಡೆದ ಚಂದ್ರು ಎಂಬ ಯುವಕನ ಕೊಲೆಯ ವಿಚಾರದಲ್ಲಿ ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು. ಗೃಹ ಸಚಿವರು ಹೇಳಿರುವುದು ಸತ್ಯ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್‌. ರವಿ ಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊಲೆ ನಡೆದ ಜಾಗದಲ್ಲಿ ಸ್ಥಳೀಯರಿದ್ದರು. ಮೃತ ಚಂದ್ರುನ ಸ್ನೇಹಿತ ಸೈಮನ್ ಅಲ್ಲೇ ಇದ್ದ. ಅವನು ಚುಚ್ಚಿರುವುದನ್ನು ನೋಡಿದ್ದಾನೆ. ಉರ್ದು ಬರಲ್ಲ ಎಂದು ಹೇಳಿದಾಗ ಚುಚ್ಚಿದ್ದಾರೆ. ಮೃತನ ತಾಯಿ, ಚಿಕ್ಕಮ್ಮ, ಸೈಮನ್‌ ಎಲ್ಲರೂ ಅದನ್ನೇ ಹೇಳಿದ್ದಾರೆ. ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿ’ ಎಂದು ಆಗ್ರಹಿಸಿದರು.

‘ಚಂದ್ರು ಅವರನ್ನು ಹತ್ಯೆ ಮಾಡಿರುವುದು ಗೂಂಡ ಮುಸ್ಲಿಮರು. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಸೈಮನ್‌ ಹೇಳಿದ್ದಾರೆ. ಬೈಕ್‌ಗೆ ಅಪಘಾತ ಆಗಿದ್ದು ನಿಜ. ಆಗ ಉರ್ದುವಿನಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಉರ್ದು ಬರುವುದಿಲ್ಲ ಎಂದಾಗ ಕೊಲೆ ಮಾಡಿದ್ದಾರೆ. ರಕ್ತಸ್ರಾವದಿಂದ ಚಂದ್ರು ಸಾವನ್ನಪ್ಪಿದ್ದಾರೆ’ ಎಂದು ರವಿ ಹೇಳಿದರು.

ADVERTISEMENT

ಕರ್ನಾಟಕದಲ್ಲಿ ಕನ್ನಡ ಮೊದಲು, ದೇಶದಲ್ಲಿ ಹಿಂದಿ ಮೊದಲು: ಹಿಂದಿ ಭಾಷೆ ಹೇರಿಕೆ ವಿಚಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಕನ್ನಡಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಪ್ರಾದೇಶಿಕ ಭಾಷೆಗೆ ಅನ್ಯಾಯ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ದೇಶ ಸುತ್ತಿದವರು. ದೇಶದಲ್ಲಿ ಕೋಟ್ಯಂತ ತರ ಜನ ಯಾವ ಭಾಷೆ ಮಾತನಾಡುತ್ತಾರೆ ಎನ್ನುವುದು ಅವರಿಗೆ ಗೊತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕೇ ಅಗ್ರಸ್ಥಾನ. ದೇಶದ ವಿಚಾರ ಬಂದಾಗ ರಾಷ್ಟ್ರೀಯ ಭಾಷೆ ಹಿಂದಿಗೆ ಅಗ್ರಸ್ಥಾನ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಕರ್ನಾಟಕದಲ್ಲಿ ಕನ್ನಡ ಮೊದಲು, ದೇಶದಲ್ಲಿ ಹಿಂದಿ ಮೊದಲು’ ಎಂದರು.

‘ಅರ್ಚಕರು ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ದೇವಾಲಯಗಳಲ್ಲಿ ಸ್ವಾರ್ಥ ಬಿಟ್ಟು ಕೆಲಸ ಮಾಡುವುದು ಅರ್ಚಕರು. ದೇವಾಲಯದ ಸ್ವಚ್ಚತೆ, ಪೂಜೆ, ವಿಧಿವಿಧಾನಗಳನ್ನು ಅವರು ಮಾಡುತ್ತಾರೆ. ಕುಮಾರಸ್ವಾಮಿಯವರ ಈ ಹೇಳಿಕೆ ಸರಿಯಲ್ಲ. ಈ ಹೇಳಿಕೆಯನ್ನು ಅವರು ವಾಪಸ್ ಪಡೆಯಬೇಕು‘ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮುಸ್ಲಿಮರ ಆಟೋಗಳನ್ನು ಬಳಸಬೇಡಿ’ ಎಂದು ಹಿಂದು ರಕ್ಷಣಾ ವೇದಿಕೆ ಅಭಿಯಾನ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ರವಿ ಕುಮಾರ್‌, ‘ಆಟೋ ಬಳಸಬಾರದು, ಮಾವಿನ ಹಣ್ಣು ಖರೀದಿ ಮಾಡಬಾರದು ಎನ್ನುವ ವಿಚಾರಗಳಲ್ಲಿ ಹಿಂದು– ಮುಸ್ಲಿಂ ಎಂದು ತರಬಾರದು. ಯಾವ ಆಟೋ ಮೊದಲು ಬರುತ್ತೋ ಆ ಆಟೋವನ್ನು ಜನರು ಬಳಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.