ADVERTISEMENT

ನಾಡು, ಸಂಸ್ಕೃತಿಗೆ ತಾಳೆಯಾಗದ ಪಾಟೀಲರ ತೈಲವರ್ಣ: ಡಿ. ಮಹೇಂದ್ರ ಸ್ಪಷ್ಟನೆ

ನಾಡದೇವಿ ರಚನಾ ಸಮಿತಿ ಅಧ್ಯಕ್ಷ ಡಿ. ಮಹೇಂದ್ರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 15:17 IST
Last Updated 23 ನವೆಂಬರ್ 2022, 15:17 IST
ಡಿ. ಮಹೇಂದ್ರ
ಡಿ. ಮಹೇಂದ್ರ   

ಬೆಂಗಳೂರು: ‘ಗದಗಿನ ಕಲಾವಿದ ಸಿ.ಎಸ್. ಪಾಟೀಲ ಅವರು 1953ರಲ್ಲಿ ರಚಿಸಿದ ಭುವನೇಶ್ವರಿಯ ತೈಲವರ್ಣ ಚಿತ್ರದ ಹಲವು ಅಂಶಗಳು ಕನ್ನಡ ನಾಡು, ಸಂಸ್ಕೃತಿಗೆ ತಾಳೆಯಾಗುತ್ತಿಲ್ಲ’ ಎಂದುನಾಡದೇವಿ ರಚನಾ ಸಮಿತಿಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದ್ದಾರೆ.

ಈ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಚಿತ್ರವು ಸಾಹಿತ್ಯ ಹಿನ್ನೆಲೆಯುಳ್ಳವರ ಕಲ್ಪನೆಗಳಿಗೆ ರೂಪ ನೀಡಿದೆ. ಕಲಾವಿದನ ಪ್ರತಿಭೆ ಹಾಗೂ ಕ್ರಿಯಾಶೀಲತೆಗೆ ಅವಕಾಶ ಇಲ್ಲವಾಗಿದೆ. ಶಿಫಾರಸು ಮಾಡಲಾದ ನಾಡದೇವತೆ ಚಿತ್ರದ ಬಗ್ಗೆಗದಗ ಜಿಲ್ಲೆಯ ಸಾಹಿತಿಗಳು ಹಾಗೂ ಕಲಾವಿದರು ಆಕ್ಷೇಪ ವ್ಯಕ್ತಪಡಿಸಿರುವುದು ಆಶ್ಚರ್ಯವನ್ನುಂಟುಮಾಡಿದೆ. ಈ ಹಿಂದೆ ನಾಡಗೀತೆಯ ಆಯ್ಕೆ ಹಾಗೂ ಧಾಟಿಯ ಸಂದರ್ಭದಲ್ಲೂ ಅಪಸ್ವರಗಳು ವ್ಯಕ್ತವಾಗಿದ್ದವು.ಸಿ.ಎಸ್. ಪಾಟೀಲ ಅವರು ರಚಿಸಿದ ಚಿತ್ರದಲ್ಲಿಕಿರೀಟವು ಉತ್ತರ ಭಾರತದ ಶೈಲಿಯಲ್ಲಿದೆ.ಪಾರ್ಸಿ ಪೌರಾಣಿಕ ನಾಟಕಗಳನ್ನು ಹೋಲುತ್ತದೆ’ ಎಂದು ಹೇಳಿದ್ದಾರೆ.

‘ಬಿಳಿಯ ಬಣ್ಣದ ಸೀರೆಯ ಸಂಕೇತದಲ್ಲೂ ಸ್ಟಷ್ಟತೆಯಿಲ್ಲ. ನಾಡದೇವಿಯ ಶರೀರ ಅಂಗಾಗಗಳ ರಚನೆಯಲ್ಲಿಯೂ ಪ್ರಬುದ್ಧತೆ ಇಲ್ಲ.ಕೈಗಳ ರಚನೆಯಲ್ಲಿ ಒಂದು ಕೈ ಕೆಳಗೆ, ಇನ್ನೊಂದು ಕೈ ಮೇಲೆ ಇದೆ. ಸಾಂಪ್ರದಾಯಿಕ ಚಿತ್ರರಚನಾ ತಂತ್ರ, ಕೌಶಲವನ್ನು ಅನುಸರಿಸಿಲ್ಲ. ನಾಡದೇವಿಯ ಕಾಲುಗಳು ಮರೆಯಾಗಿವೆ. ಕರ್ನಾಟಕ ನಕಾಶೆಯ ತಳಕ್ಕೆ (ಕೇರಳ ರಾಜ್ಯದ ಬಳಿ) ಸಮುದ್ರ ಅಲೆಗಳ ರಚನೆಯಿರುವುದು ವಾಸ್ತವಿಕತೆಗೆ ದೂರವಾಗಿದೆ. ಕೇರಳ ಭಾಗವನ್ನು ನಾಡದೇವಿ ಒಳಗೊಳ್ಳುವುದು ಆ ರಾಜ್ಯದ ಆಕ್ಷೇಪಕ್ಕೆ ಕಾರಣವಾಗಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

‘ಕರ್ನಾಟಕ ನಕಾಶೆಯೂ ಸಮರ್ಪಕವಾಗಿ ಚಿತ್ರಿತವಾಗಿಲ್ಲ.ಬಹುಮುಖ್ಯವಾಗಿ ನಾವು ಭಾವನಾತ್ಮಕವಾಗಿ ಒಪ್ಪಿರುವ ಕನ್ನಡದ ಧ್ವಜವೇ ಈ ಚಿತ್ರದಲ್ಲಿ ಇಲ್ಲ.ನಾಡದೇವಿಯ ಸುತ್ತಲಿನ ಚಿತ್ರಣಗಳು ಬಹಳ ಸಂಖ್ಯೆಯಲ್ಲಿದ್ದು, ಶಾಲಾ ಮಕ್ಕಳು ಹಾಗೂ ಕಲಾಸಕ್ತರು ನಾಡದೇವಿ ಪ್ರತಿಮೆಯ ಪ್ರತಿಯನ್ನು ನಕಲಿಸಲು ಮತ್ತು ಮುದ್ರಣಕ್ಕೆ ಬಳಸಲು ಕಷ್ಟಕರವಾಗಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಈ ಎಲ್ಲ ಅಂಶಗಳು ಹಾಗೂಕಲಾರಚನೆ ಸೂಕ್ಷಗಳನ್ನು ಗಮನದಲ್ಲಿರಿಸಿಯೇ ಸಮಿತಿ ನಾಡದೇವಿಯ ಚಿತ್ರವನ್ನು ಶಿಫಾರಸು ಮಾಡಿದೆ.ನಾಡಿನ ಹಿರಿಯ ಕಲಾವಿದ ಬಿ.ಕೆ.ಎಸ್.‌ ವರ್ಮಾ ಸೇರಿ ಹಲವು ಕಲಾವಿದರನ್ನು ಸಂಪರ್ಕಿಸಿ, ಚಿತ್ರ ರಚನೆಗೆ ಮುಂದಾಗಿದ್ದೇವೆ. ನಾಡದೇವಿಯ ವಸ್ತ್ರಾಭರಣವನ್ನು ಗದುಗಿನವರೇ ಆದ ಚೂಡಾಮಣಿ ನಂದಗೋಪಾಲ ನಿರೂಪಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.