ADVERTISEMENT

ರಾಜ್ಯಕ್ಕೆ ‘ನಾಡದೇವತೆ’ ಶಿಫಾರಸು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:30 IST
Last Updated 21 ನವೆಂಬರ್ 2022, 19:30 IST
ನಾಡದೇವತೆ ಚಿತ್ರ
ನಾಡದೇವತೆ ಚಿತ್ರ   

ಬೆಂಗಳೂರು: ಚಿತ್ರ ಕಲಾವಿದ ಕೆ. ಸೋಮಶೇಖರ್‌ ಸಿದ್ಧಪಡಿಸಿರುವ ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ‘ನಾಡದೇವತೆ’ಯ ಚಿತ್ರವನ್ನು ಅಧಿಕೃತವೆಂದು ಪರಿಗಣಿಸುವಂತೆ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿ ಶಿಫಾರಸು ಮಾಡಿರುವ ನಾಡದೇವತೆ‌ ಚಿತ್ರದ ಹಿಂದೆ ಕರ್ನಾಟಕದ ನಕ್ಷೆ ಇದೆ. ಕಾಲಿಗೆ ಆಸರೆಯಾಗಿ ಕೆಳಗೆ ಒಂದು ಹಾಗೂ ಕಾಲಿನ ಇಕ್ಕೆಲಗಳಲ್ಲಿ ಎರಡು ತಾವರೆ(ಕಮಲ) ಹೂವುಗಳಿವೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ಮಾಡಲು ಮತ್ತು ಶಾಲಾ– ಕಾಲೇಜುಗಳ ಗೋಡೆಗಳಲ್ಲಿ ಅಳವಡಿಸಲು ನಾಡದೇವತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಆಯ್ಕೆ ಮಾಡಿ ಶಿಫಾರಸು ಮಾಡಲು 2021ರ ಸೆ. 23ರಂದು ಮಹೇಂದ್ರ ನೇತೃತ್ವದಲ್ಲಿ ಚಿತ್ರ ಕಲಾವಿದರ ಸಮಿತಿಯನ್ನು ರಚಿಸಲಾಗಿತ್ತು. ಬೆಂಗಳೂರಿನ ಚೂಡಾಮಣಿ ನಂದಗೋಪಾಲ್‌, ರಾಯಚೂರಿನ ಎಚ್‌.ಎಚ್‌. ಮ್ಯಾದರ್‌, ಬೆಳಗಾವಿಯ ಬಾಬು ನಡೋಣಿ, ವಿಜಯಪುರದ ವಿ.ಎಸ್‌. ಕಡೇಮನಿ ಸಮಿತಿಯ ಸದಸ್ಯರಾಗಿದ್ದರು.

ADVERTISEMENT

ಸಮಿತಿಯ ಸೂಚನೆಯಂತೆ ಸೋಮಶೇಖರ್ ಅವರು ನಾಡದೇವತೆಯ ಚಿತ್ರವನ್ನು ಸಿದ್ಧಪಡಿಸಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿಸಲಾಗುವ ನಾಡದೇವತೆಯ ಪ್ರತಿಮೆಯು ಇದೇ ಚಿತ್ರದಂತೆ ಇರಲಿದೆ.

‘ಕಾರ್ಯಕ್ರಮಗಳಲ್ಲಿ ರಾಜ್ಯದ ನಾಡದೇವತೆಯ ಬೇರೆ ಬೇರೆ ಚಿತ್ರಗಳನ್ನು ಸದ್ಯ ಬಳಸಲಾಗುತ್ತಿದೆ. ಸರ್ಕಾರದ ಸೂಚನೆಯಂತೆ ಅಧಿಕೃತವಾದ ಚಿತ್ರವನ್ನು ಶಿಫಾರಸು ಮಾಡಿದ್ದೇವೆ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಜಾರಿಗೆ ಬರಲಿದೆ’ ಎಂದು ಡಿ. ಮಹೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.