ADVERTISEMENT

ಕಾಪು: ಜೀವಂತ ನಾಗನಿಗೆ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2018, 19:30 IST
Last Updated 15 ಆಗಸ್ಟ್ 2018, 19:30 IST
ಮಜೂರಿನ ಗೋವರ್ಧನ ರಾವ್ ಬುಧವಾರ ಜೀವಂತ ನಾಗನಿಗೆ ಅಭಿಷೇಕ ಮಾಡಿದರು
ಮಜೂರಿನ ಗೋವರ್ಧನ ರಾವ್ ಬುಧವಾರ ಜೀವಂತ ನಾಗನಿಗೆ ಅಭಿಷೇಕ ಮಾಡಿದರು   

ಪಡುಬಿದ್ರಿ: ನಾಗರ ಪಂಚಮಿಯಂದು ಕರಾವಳಿಯಲ್ಲಿ ಎಲ್ಲೆಡೆ ಶಿಲಾ ನಾಗನಿಗೆ ಸೀಯಾಳ, ಹಾಲು ಅಭಿಷೇಕ ಮಾಡುತ್ತಾರೆ. ಆದರೆ ಕಾಪು ಬಳಿಯ ಮಜೂರಿನಲ್ಲಿ ಗೋವರ್ಧನ ರಾವ್ ಅವರು ಶುಶ್ರೂಷೆಗೆ ತರುವ ಜೀವಂತ ನಾಗನಿಗೆ ಸೀಯಾಳ ಅಭಿಷೇಕ ಮಾಡುವ ಪರಿಪಾಠವನ್ನು 30 ವರ್ಷಗಳಿಂದ ಇಟ್ಟುಕೊಂಡಿದ್ದು, ಬುಧವಾರವೂ ಅದನ್ನು ಮುಂದುವರಿಸಿದರು.

ಇವರ ಅಜ್ಜ ದಿವಂಗತ ಅನಂತಕೃಷ್ಣ ರಾವ್ ಅವರೂ ಗಾಯಗೊಂಡ ನಾಗಗಳಿಗೆ ಶುಶ್ರೂಷೆ ಮಾಡಿ ಕಾಡಿಗೆ ಬಿಡುತ್ತಿದ್ದರು. ಎಳೆಯ ವಯಸ್ಸಿನಲ್ಲಿಯೇ ಅವರೊಂದಿಗೆ ತೆರಳುತ್ತಿದ್ದ ಗೋವರ್ಧನ್ ಅದನ್ನೀಗ ಮುಂದುವರಿಸಿದ್ದಾರೆ. ಈವರೆಗೆ ಸುಮಾರು ಒಂದು ಸಾವಿರ ನಾಗಗಳಿಗೆ ಶುಶ್ರೂಷೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಈ ಬಾರಿ ನಾಗರಪಂಚಮಿ ಹಬ್ಬದಂದು ಶುಶ್ರೂಷೆಗೆ ತಂದಿದ್ದ ನಾಲ್ಕು ನಾಗರಗಳಿಗೆ ಎಳನೀರು ಹಾಗೂ ಜಲಾಭಿಷೇಕ ಮಾಡಿದರು. ಇವರ ಈ ಕಾರ್ಯಕ್ಕೆ ತಾಯಿ ನೀರಜ, ಪತ್ನಿ ಶ್ರೀದೇವಿ, ಮಗ ಮಧುಸೂಧನ, ಮಗಳು ಶ್ರೀಶೈಲಾ ಸಹಕಾರ ನೀಡಿದರು.

ADVERTISEMENT

ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಹಾಗೂ ಕ್ಯಾಟರಿಂಗ್ ಉದ್ಯಮ ನಡೆಸುವ ಗೋವರ್ಧನ್ ಅವರು ಎಲ್ಲೋ ಗಾಯಗೊಂಡ ನಾಗನನ್ನು ತಂದು ಶುಶ್ರೂಷೆ ಮಾಡುತ್ತಾರೆ. ಕೆಲವೊಂದು ಹಾವುಗಳ ಗಾಯ ಸಂಪೂರ್ಣ ಗುಣಮುಖವಾಗಲು ವರ್ಷಗಳೇ ಕಳೆದಿದ್ದು ಇದೆ ಎಂದು ಅವರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.