ADVERTISEMENT

ಐಸಿಸಿಯಿಂದ ಆಡಳಿತ ಮಂಡಳಿ ಹೊರಗಿಡಲು ಕ್ರಮ: ನಾಗಲಕ್ಷ್ಮಿ ಬಾಯಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 20:16 IST
Last Updated 2 ಜನವರಿ 2019, 20:16 IST

ಮೈಸೂರು: ಕಚೇರಿ, ಕಂಪನಿಗಳಲ್ಲಿ ದೌರ್ಜನ್ಯ ಕುರಿತು ವಿಚಾರಣೆ ನಡೆಸುವ ಆಂತರಿಕ ದೂರು ಸಮಿತಿಯಿಂದ (ಐಸಿಸಿ) ಆಡಳಿತ ಮಂಡಳಿ ಸದಸ್ಯರನ್ನು ಕೈಬಿಟ್ಟು ಕೆಲಮಾರ್ಪಾಡು ಮಾಡಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಇಲ್ಲಿ ಬುಧವಾರ ತಿಳಿಸಿದರು.

‘ಆಡಳಿತ ಮಂಡಳಿ ಸದಸ್ಯರು ಇದ್ದರೆ ದೂರು ಹೇಳಲು ಉದ್ಯೋಗಿಗಳು ಹೆದರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅವರ ಬದಲು ಹಿರಿಯ ಉದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯರು, ವೈದ್ಯರು, ವಕೀಲರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಬೇಕು. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಕಂಪನಿ, ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿದೆ ಎಂದರು.

ADVERTISEMENT

‘ರಾಜ್ಯದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಶೇ 60ರಷ್ಟು ದೂರುಗಳು ಬರುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಿತರಾಗಿ ಮಹಿಳೆಯರನ್ನು ವಂಚಿಸಿರುವ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಆಯೋಗದಲ್ಲೇ ಒಂದು ವಿಭಾಗ ಮಾಡಿ ಡಿಸಿಪಿ ಮಟ್ಟದ ಮಹಿಳಾ ಅಧಿಕಾರಿ ನೇಮಕ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.