ADVERTISEMENT

ಅನುದಾನ: ನಳಿನ್ ಕುಮಾರ್ ಕಟೀಲ್ ಮುಂದೆ ಶಾಸಕರ ದುಮ್ಮಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 19:30 IST
Last Updated 19 ಜೂನ್ 2020, 19:30 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌    

ಬೆಂಗಳೂರು: ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಅನುದಾನವೂ ಸಿಗುತ್ತಿಲ್ಲ. ಆದ್ದರಿಂದ ಅನುದಾನ ಕೊಡಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಬಿಜೆಪಿಯ ಕೆಲವು ಶಾಸಕರು ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಮನವಿ ಮಾಡಿದ್ದಾರೆ.

ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ನಳಿನ್‌ ಬೆಂಗಳೂರಿಗೆ ಬಂದಿದ್ದರು. ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜತೆಯಲ್ಲಿ ಎಂಟರಿಂದ ಹತ್ತು ಶಾಸಕರು ನಳಿನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಶಾಸಕ ಅರವಿಂದ ಬೆಲ್ಲದ ಅವರ ಮನೆಯಲ್ಲಿ ಈ ಶಾಸಕರು ಸಭೆ ನಡೆಸಿ ಬಳಿಕ ಕಟೀಲ್‌ ಅವರ ಬಳಿ ತೆರಳಿದರು. ‘ನಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಮತ್ತು ನಾವು ಹೇಳುವ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಬೇಕು’ ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ‘ಸಿ.ಎಂ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ನೀವು ಮಧ್ಯೆ ಪ್ರವೇಶಿಸಲೇಬೇಕು’ ಎಂದು ಕೋರಿದರು ಎಂದು ಮೂಲಗಳು ಹೇಳಿವೆ.

ADVERTISEMENT

‘ಈ ಬಗ್ಗೆ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಬಳಿಕ ವಿಭಾಗವಾರು ಸಭೆಗಳನ್ನು ಕರೆಯಬೇಕು. ಬಹಳ ವರ್ಷಗಳ ಬಳಿಕ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಸಂದರ್ಭದಲ್ಲಿ ನಮ್ಮ ಕೆಲಸಗಳು ಆಗದಿದ್ದರೆ ಇನ್ನು ಯಾವಾಗ ಆಗುತ್ತದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಳಿನ್‌, ‘ಆದಷ್ಟು ಬೇಗ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ಅರವಿಂದ ಬೆಲ್ಲದ, ಅನಿಲ್‌ ಬೆನಕೆ, ಅಭಯಪಾಟೀಲ, ಜ್ಯೋತಿ ಗಣೇಶ್, ವೇದವ್ಯಾಸ ಕಾಮತ್‌, ಭರತ್ ಶೆಟ್ಟಿ ಮುಂತಾದವರು ಇದ್ದರು ಎಂದು ಮೂಲಗಳು ತಿಳಿಸಿವೆ.

ಬಿಎಸ್‌ವೈ ಸಂಪುಟ ಸೇರಲು ಆಸಕ್ತಿ ಇಲ್ಲ:ಯತ್ನಾಳ

‘ಯಡಿಯೂರಪ್ಪ ಅವರು ಸಚಿವ ಸಂಪುಟದಲ್ಲಿ ಮಂತ್ರಿ ಆಗಲು ನನಗೆ ಆಸಕ್ತಿ ಇಲ್ಲ. ಅಂತಹ ವಾತಾವರಣವೂ ಇಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ಹೇಳಿದರು.

‘ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎಂಬ ಬೇಸರವಿದೆ. ಸಿ.ಎಂ ಕೊರೊನಾ ನಿಯಂತ್ರಣದಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಪಕ್ಷದ ಅಧ್ಯಕ್ಷರಿಗೆ ಹೇಳಿದ್ದೇನೆ’ ಎಂದು ಯತ್ನಾಳ ವ್ಯಂಗ್ಯವಾಡಿದರು.

‘ಕಾಲಾಯ ತಸ್ಮೈನಮಃ, ನಾನು ಬಗ್ಗಿದ್ದೇನೆ. ನಾನು ಬಗ್ಗಿದೇನೆ ಎಂದರೆ ಒಳ್ಳೆಯದಾಗುತ್ತದೆ. ಯಾವಾಗ ಬಗ್ಗಬೇಕೋ ಆಗ ಬಗ್ಗುತ್ತೇನೆ. ಯಾವಾಗ ಸಿಡಿದೇಳಬೇಕೋ ಆಗ ಸಿಡಿದೇಳುತ್ತೇನೆ.ಈಗ ತಲೆ ಬಗ್ಗಿಸಿದ್ದೇನೆ ಎಂದರೆ ಒಳ್ಳೆಯದಾಗುತ್ತದೆ ಎಂಬುದು ಅದರ ಅರ್ಥ’ ಎಂದರು.

‘ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ. ಮೃದುವಾಗಿದ್ದೇನೆ ಎಂದುಕೊಳ್ಳುವುದು ಬೇಡ. ಅಧಿಕಾರಿಗಳ ವರ್ಗಾವಣೆ ಮತ್ತು ಕ್ಷೇತ್ರದ ಅನುದಾನ ಹಂಚಿಕೆ ಕುರಿತು ಅಧ್ಯಕ್ಷರ ಜತೆ ಮಾತನಾಡಿದ್ದು ನಿಜ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.