ADVERTISEMENT

ಇನ್ನೂ 11 ಜಿಲ್ಲೆಗಳಲ್ಲಿ ಕಾರ್ಯಾಲಯ: ನಳಿನ್‌ ಕುಮಾರ್‌ ಕಟೀಲ್

8 ಜಿಲ್ಲೆಗಳ ಬಿಜೆಪಿ ಕಾರ್ಯಾಲಯಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 22:32 IST
Last Updated 14 ಆಗಸ್ಟ್ 2020, 22:32 IST
ಶಿಲಾನ್ಯಾಸ ಕಾರ್ಯಕ್ರಮವನ್ನು ನಳಿನ್‌ ಕುಮಾರ್‌ ಕಟೀಲ್‌ ಉದ್ಘಾಟಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಸಂಚಾಲಕ ಮಾ.ನಾಗರಾಜ್‌, ಸಚಿವರಾದ ಆರ್‌.ಅಶೋಕ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದರು.
ಶಿಲಾನ್ಯಾಸ ಕಾರ್ಯಕ್ರಮವನ್ನು ನಳಿನ್‌ ಕುಮಾರ್‌ ಕಟೀಲ್‌ ಉದ್ಘಾಟಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಸಂಚಾಲಕ ಮಾ.ನಾಗರಾಜ್‌, ಸಚಿವರಾದ ಆರ್‌.ಅಶೋಕ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದರು.   

ಬೆಂಗಳೂರು: ‘ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಎರಡು– ಮೂರು ವರ್ಷಗಳಲ್ಲಿ ಪಕ್ಷದ ಕಾರ್ಯಾಲಯ ಕಟ್ಟಡಗಳನ್ನು ಸ್ಥಾಪಿಸುತ್ತೇವೆ. ಇದಕ್ಕಾಗಿ ಭೂಮಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ರಾಜ್ಯದ ಎಂಟು ಜಿಲ್ಲೆಗಳ ಬಿಜೆಪಿ ಕಾರ್ಯಾಲಯ ಕಟ್ಟಡಗಳ ವರ್ಚುವಲ್ ಶಿಲಾನ್ಯಾಸ‌ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಮನಗರ, ಹಾವೇರಿ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ 11 ಕಡೆಗಳಲ್ಲಿ ಕಾರ್ಯಾಲಯ ಕಟ್ಟಡ ನಿರ್ಮಾಣ ಆರಂಭಿಸುತ್ತೇವೆ’ ಎಂದು ನಳಿನ್‌ ತಿಳಿಸಿದರು.

ADVERTISEMENT

ಮೋದಿ ನಿರ್ದೇಶನದ ಮೇರೆಗೆ ನಿರ್ಮಾಣ:‘ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಸ್ವಂತ ಕಾರ್ಯಾಲಯ ಕಟ್ಟಡಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ 500 ಕಟ್ಟಡಗಳನ್ನು ಸ್ಥಾಪಿಸಿದ್ದು, ಇನ್ನೂ
300 ಕಟ್ಟಡಗಳನ್ನು ಸದ್ಯವೇ ನಿರ್ಮಿಸಲಾಗುವುದು’ ಎಂದು ದೆಹಲಿಯಿಂದ ಆನ್‌ಲೈನ್‌ ಮೂಲಕ ಶಿಲಾನ್ಯಾಸ ನೆರವೇರಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಬೀದರ್‌, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಚಾಮರಾಜನಗರ ಮತ್ತು ಕೋಲಾರ ಹೀಗೆ ಒಟ್ಟು ಎಂಟು ಜಿಲ್ಲೆಗಳು, ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದ ಕಾರ್ಯಾಲಯಗಳ ಭೂಮಿ ಪೂಜೆ ನಡೆಯಿತು.

ಕಟ್ಟಡಗಳ ನಿರ್ಮಾಣಕ್ಕೆ ಹಣ ಎಲ್ಲಿಂದ?
‘ಕಾರ್ಯಾಲಯಗಳಿಗೆ ಜಮೀನು ಖರೀದಿಸುತ್ತೇವೆ. ಕಾರ್ಯಾಲಯಗಳ ನಿರ್ಮಾಣದ ಪ್ರಕ್ರಿಯೆ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ತಗಲುವ ವೆಚ್ಚವನ್ನು ‘ಜಿಲ್ಲಾ ಕಾರ್ಯಾಲಯ ಕಟ್ಟಡ ನಿಧಿ ಅರ್ಪಣೆ’ ಮೂಲಕ ಸಂಗ್ರಹಿಸಲಾಗುತ್ತಿದೆ’ ಎಂದು ಕಾರ್ಯಾಲಯ ಭವನ ನಿರ್ಮಾಣ ಸಮಿತಿ ರಾಜ್ಯ ಸಂಚಾಲಕ ಡಾ.ಮಾ.ನಾಗರಾಜ್‌ ತಿಳಿಸಿದರು.

‘ಕಟ್ಟಡಕ್ಕೆ ಕಾರ್ಯಕರ್ತರು ನಿಧಿ ಸಮರ್ಪಣೆ ಮಾಡುತ್ತಾರೆ. ಕೋಲಾರದಲ್ಲಿ ₹1.17 ಕೋಟಿ ವಾಗ್ದಾನ ಮಾಡಿದ್ದಾರೆ. ವಿಜಯಪುರದಲ್ಲಿ ₹67 ಲಕ್ಷ ವಾಗ್ದಾನ ಮಾಡಿದ್ದು ಆ ಪೈಕಿ ₹30 ಲಕ್ಷ ಚೆಕ್‌ ಕಳಿಸಿದ್ದಾರೆ. ಬೀದರ್‌ನಲ್ಲಿ ₹70 ಲಕ್ಷ ವಾಗ್ದಾನ ಆಗಿದೆ. ಇವು ಕೆಲವು ಉದಾಹರಣೆಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.