ADVERTISEMENT

ಗೂಂಡಾ ರಾಜಕಾರಣ: ಅಶ್ವತ್ಥನಾರಾಯಣ ಮೇಲೆ ಹಲ್ಲೆ ಯತ್ನಕ್ಕೆ ನಳಿನ್‌ಕುಮಾರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 17:59 IST
Last Updated 3 ಜನವರಿ 2022, 17:59 IST
ನಳೀನ್ ಕುಮಾರ್
ನಳೀನ್ ಕುಮಾರ್   

ಬೆಂಗಳೂರು: ‘ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಮೇಲೆ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಮತ್ತು ವಿಧಾನಪರಿಷತ್‌ ಸದಸ್ಯ ಎಸ್‌.ರವಿ ಹಲ್ಲೆಗೆ ಮುಂದಾಗಿರುವುದು ಗೂಂಡಾ ರಾಜಕಾರಣಕ್ಕೆ ನಿದರ್ಶನ. ಈ ಘಟನೆ ಖಂಡನೀಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ಕಾಂಗ್ರೆಸಿಗರು ಪ್ರಜಾಪ್ರಭುತ್ವಕ್ಕೆ ಅವಮಾನಿಸುವ ರೀತಿ ತೋಳ್ಬಲದ ರಾಜಕೀಯ ಪ್ರದರ್ಶಿಸಿದ್ದಾರೆ.ಇದಕ್ಕೆ ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.

‘ಕಾಂಗ್ರೆಸ್‌ನ ಈ ಗೂಂಡಾಗಿರಿ ಸಹಿಸಲಾಗುವುದಿಲ್ಲ ಮತ್ತು ರಾಜ್ಯವೇ ತಮ್ಮ ಜಹಗೀರ್ ಎಂದು ಪಾಳೆಗಾರಿಕೆ ನಡೆಸಲು ರಾಜ್ಯದ ಜನ ಬಿಡುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೀಗೆ ರಾಜಕೀಯ ಶಕ್ತಿ ಪ್ರದರ್ಶನ ಅಥವಾ ತೋಳ್ಬಲಕ್ಕೆ ಮುಂದಾದರೆ ತಕ್ಕ ಶಾಸ್ತಿ ಮಾಡುತ್ತಾರೆ ಎಂಬ ಎಚ್ಚರಿಕೆ ಅಗತ್ಯ. ಡಿ.ಕೆ.ಸುರೇಶ್ ಮತ್ತು ಎಸ್‌.ರವಿ ಸಚಿವರ ಮೇಲೆ ಹಲ್ಲೆಗೆ ಮುಂದಾಗಿದ್ದು ಖಂಡನೀಯ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ವರದಿ ಕೇಳಿದ್ದೇನೆ: ಗೃಹ ಸಚಿವ ಆರಗ

‘ಸಚಿವರ ಮೇಲೆ ಕಾಂಗ್ರೆಸ್ ನಾಯಕರ ಅನಾಗರಿಕ ವರ್ತನೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್‌ ನಾಯಕರ ಇಂದಿನ ದುಂಡಾವರ್ತನೆ ಜನ ಸಹಿಸುವುದಿಲ್ಲ. ಈ ಘಟನೆಯ ಬಗ್ಗೆ ಜಿಲ್ಲಾ ಪೊಲೀಸರಿಂದ ವರದಿ ಕೇಳಿದ್ದೇನೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.