ADVERTISEMENT

ರಾಜ್ಯದ ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:31 IST
Last Updated 29 ಜನವರಿ 2022, 19:31 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   

ಬೆಂಗಳೂರು: ಕರ್ನಾಟಕದಲ್ಲಿರುವ ಎಲ್ಲ ವಿಮಾನ ನಿಲ್ದಾಣಗಳಿಗೆ ಕನ್ನಡ ನಾಡು–ನುಡಿಗೆ ಸೇವೆ ಸಲ್ಲಿಸಿದವರ ಹೆಸರಿಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ನಾಗರಿಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದಾರೆ.

‘ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವ ವಿಮಾನ ನಿಲ್ದಾಣಗಳನ್ನು ಉನ್ನತೀಕರಿಸಲು ಕೇಂದ್ರ ಸರ್ಕಾರ ಕ್ರಮವಹಿಸುತ್ತಿದೆ. ಎರಡನೇ ಹಂತದ ನಗರಗಳಲ್ಲಿ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿರುವ ಎರಡನೇ ಹಂತದ ಕೆಲ ನಗರಗಳು ವಿಮಾನ ನಿಲ್ದಾಣಗಳನ್ನು ಹೊಂದಿವೆ. ಈ ಸಾರಿಗೆಯ ಮೇಲೆ ಜನರ ಅವಲಂಬನೆ ಹೆಚ್ಚುತ್ತಿದೆ. ವಿಮಾನ ನಿಲ್ದಾಣಗಳು ಸಾಂಸ್ಕೃತಿಕ ಮೌಲ್ಯಗಳನ್ನೂ ಸಂಕೇತಿಸುತ್ತವೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರು ಇಟ್ಟಿರುವುದು ಕನ್ನಡಿಗರಿಗೆ ಹೆಮ್ಮೆಯ ಭಾವ ಮೂಡಿಸಿದೆ. ಅದೇ ರೀತಿ ರಾಜ್ಯದ ಉಳಿದ ನಿಲ್ದಾಣಗಳಿಗೂ ಕನ್ನಡಿಗರ ಹೆಸರನ್ನು ಇಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ರಾಜ್ಯದ ವಿವಿಧ ಭಾಗಗಳಲ್ಲಿರುವ ವಿಮಾನ ನಿಲ್ದಾಣಗಳಿಗೆ ಅಲ್ಲಿನ ಸಾಧಕರ ಹೆಸರುಗಳನ್ನು ಇಡಲು ಅನುಮೋದನೆ ನೀಡಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ದೇವಿ, ರಾಷ್ಟ್ರಕವಿ ಗೋವಿಂದ ಪೈ ಅಥವಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಹೆಸರನ್ನು ಇಡಬೇಕು. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಥವಾ ಸರ್‌.ಎಂ. ವಿಶ್ವೇಶ್ವರಯ್ಯ, ಹುಬ್ಬಳ್ಳಿ–ಧಾರವಾಡದ ವಿಮಾನ ನಿಲ್ದಾಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ. ಬೇಂದ್ರೆ ಅಥವಾ ವಿ.ಕೃ. ಗೋಕಾಕ್ ಅವರ ಹೆಸರನ್ನು ಇಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕಲಬುರಗಿಯ ವಿಮಾನ ನಿಲ್ದಾಣಕ್ಕೆ ವಿಜ್ಞಾನೇಶ್ವರ ಅಥವಾ ಕಲ್ಯಾಣ ಬಸವಣ್ಣ, ಬೆಳಗಾವಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅಥವಾ ಸವದತ್ತಿ ಯಲ್ಲಮ್ಮ ಅವರ ಹೆಸರಿಡಬೇಕು. ಈ ಮೂಲಕ ನಾಡಿಗಾಗಿ ಸೇವೆ ಸಲ್ಲಿಸಿದವರನ್ನು ಸ್ಮರಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.