ADVERTISEMENT

ಮೆಟ್ರೊ ರೈಲು: ಕಾಯುವ ಅವಧಿ ಅರ್ಧ ಗಂಟೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 21:13 IST
Last Updated 2 ಸೆಪ್ಟೆಂಬರ್ 2022, 21:13 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಬೆಳಗಿನಜಾವ ಮತ್ತು ತಡರಾತ್ರಿ ಮೆಟ್ರೊ ರೈಲುಗಳ ಸಂಚಾರ ಅವಧಿಯನ್ನು ಬಿಎಂಆರ್‌ಸಿಎಲ್ ಕಡಿಮೆ ಮಾಡಿದೆ. ಇದರಿಂದ ಬೈಯಪ್ಪನಹಳ್ಳಿ ಕಡೆಯಿಂದ ಪ್ರಯಾಣ ಮಾಡಿ, ನಾಗಸಂದ್ರದ ಕಡೆಗೆ ಹೋಗುವವರಿಗೆ ಅನುಕೂಲದ ಬದಲಿಗೆ ಅನನುಕೂಲವೇ ಹೆಚ್ಚಾಗಿದೆ. ಕಾಯುವ ಅವಧಿ ಗರಿಷ್ಠ 30 ನಿಮಿಷಕ್ಕೆ ಹೆಚ್ಚಾಗಿದೆ.

‘ಬೆಳಿಗ್ಗೆ 5ರಿಂದ 6 ಗಂಟೆ ಮತ್ತು ರಾತ್ರಿ 10ರಿಂದ 11 ಗಂಟೆ ತನಕ ಪ್ರತಿ ರೈಲಿನ ಸಂಚಾರದ ನಡುವೆ ಇದ್ದ 20 ನಿಮಿಷಗಳ ಅಂತರವನ್ನು 15 ನಿಮಿಷಕ್ಕೆ ಇಳಿಸಲಾಗಿದ್ದು, ಆ.8ರಿಂದ ವೇಳಾಪಟ್ಟಿ ಬದಲಾಗಿದೆ. ಬೈಯಪ್ಪನಹಳ್ಳಿ ಮಾರ್ಗದ ನಿಲ್ದಾಣಗಳಲ್ಲಿ 15 ನಿಮಿಷ ಕಾದು ರೈಲು ಹತ್ತಿದವರು ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಇಳಿದು ನಾಗಸಂದ್ರ ಮಾರ್ಗದ ರೈಲು ಹತ್ತಬೇಕೆಂದರೆ 14 ಅಥವಾ 15 ನಿಮಿಷ ಕಾಯಬೇಕಾಗುತ್ತಿದೆ.

ಬೈಯ್ಯಪ್ಪನಹಳ್ಳಿಯಿಂದ ಕೆಂಪೇಗೌಡ ಮೆಟ್ರೊ ನಿಲ್ದಾಣದ ತನಕ ಯಾವ ನಿಲ್ದಾಣದಲ್ಲಿ ಪ್ರಯಾಣಿಕರು ರಾತ್ರಿ 10 ಗಂಟೆಯ ನಂತರ ರೈಲು ಹತ್ತಿದರೂ ಎರಡೂ ಕಡೆ ಸೇರಿ ಗರಿಷ್ಠ ಅರ್ಧ ಗಂಟೆ ಕಾಯಬೇಕಾಗುತ್ತಿದೆ. ರೈಲುಗಳ ಸಂಖ್ಯೆ ಹೆಚ್ಚಿಸಿ ಅವಧಿ ಕಡಿಮೆ ಮಾಡಿದ್ದರೂ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಅನುಕೂಲ ಆಗಿಲ್ಲ.

ADVERTISEMENT

ಈ ಹಿಂದೆ ಕೆಂಪೇಗೌಡ ನಿಲ್ದಾಣದಲ್ಲಿ ಗರಿಷ್ಠ 6 ನಿಮಿಷ ಕಾಯಬೇಕಾಗುತ್ತಿತ್ತು. ಈಗ ಬೈಯಪ್ಪನಹಳ್ಳಿ ಕಡೆಯಿಂದ ರೈಲು ಮೆಜೆಸ್ಟಿಕ್ ತಲುಪುವ ಒಂದು ನಿಮಿಷ ಮುನ್ನ ಒಂದು ರೈಲು ನಾಗಸಂದ್ರ ಕಡೆಗೆ ಹೋಗಿರುತ್ತದೆ. ಮುಂದಿನ ರೈಲಿಗೆ 14 ನಿಮಿಷ ಕಾಯಬೇಕಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

ನಾಗಸಂದ್ರ ಕಡೆಗೆ ಹೋಗುವ ರೈಲಿನ ವೇಳಾಪಟ್ಟಿಯನ್ನು ಸ್ವಲ್ಪ ಬದಲಿಸಿದರೆ ಪ್ರಯಾಣಿಕರು ಕಾಯುವುದು ತಪ್ಪಲಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಪರಿಶೀಲಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.