ಬೆಂಗಳೂರು: ನಗರದ ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಚಾಲನೆ ನೀಡಿದ್ದಾರೆ. ಈ ಹಳದಿ ಮೆಟ್ರೊ ಮಾರ್ಗದ ಯಶಸ್ಸಿನ ಶ್ರೇಯ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತಿಕ್ಕಾಟ ನಡೆಯುತ್ತಿದೆ.
ಮತ ಕಳ್ಳತನದ (#VoteChori) ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಮೆಟ್ರೊ ಹಳದಿ ಮಾರ್ಗದ ಕ್ರೆಡಿಟ್ (#CreditChori) ಅನ್ನು ಬಿಜೆಪಿ 'ಹೈಜಾಕ್' ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಹಳದಿ ಮೆಟ್ರೊ ಕಾಮಗಾರಿಯಲ್ಲಿ ಬಹುಪಾಲು ವೆಚ್ಚವನ್ನು ಕರ್ನಾಟಕ ಸರ್ಕಾರವು ಭರಿಸಿದ್ದು, ಭೂಸ್ವಾಧೀನ ವೆಚ್ಚ ಹಾಗೂ ಹೆಚ್ಚುವರಿ ವೆಚ್ಚ ಸೇರಿದಂತೆ ₹12 ಸಾವಿರ ಕೋಟಿಗಿಂತ ಹೆಚ್ಚು ವೆಚ್ಚಗಳನ್ನು ಭರಿಸಿದೆ ಎಂದು ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ.
ಮೆಟ್ರೊ ಯೋಜನೆಯನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ, ಗಮನಾರ್ಹ ವೆಚ್ಚವನ್ನು ಯುಪಿಎ ಸರ್ಕಾರವು ಭರಿಸಿದ್ದು, ರಾಜ್ಯ ಸರ್ಕಾರದ ಕೊಡುಗೆಯನ್ನು ಮೀರಿಸಿತ್ತು ಎಂದು ಹೇಳಿದ್ದಾರೆ.
ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯೋಜನೆಯ ಮೇಲಿನ ಬದ್ಧತೆಯು ಗಣನೀಯವಾಗಿ ಕಡಿಮೆಯಾಯಿತು. ₹8 ಸಾವಿರ ಕೋಟಿ ಒದಗಿಸುವ ಮೂಲಕ ತನ್ನ ಕೈ ತೊಳೆದುಕೊಂಡಿತು ಎಂದು ಆರೋಪಿಸಿದ್ದಾರೆ.
ಕೇಂದ್ರದ ಬೆಂಬಲದ ಕೊರತೆಯಿಂದಾಗಿ ಉಳಿದ ಯೋಜನಾ ವೆಚ್ಚ ಭರಿಸಲು ಬಿಎಂಆರ್‌ಸಿಎಲ್ ಸಾಲ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.
ಕೇಂದ್ರಕ್ಕೆ ರಾಜ್ಯದ ತೆರಿಗೆಯ ಪಾಲು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ರಾಜ್ಯಕ್ಕೆ ಬರುವ ಆದಾಯ ಮಾತ್ರ ಕಡಿಮೆಯಾಗುತ್ತಿದೆ. ಮೆಟ್ರೊ ಹಳದಿ ಮಾರ್ಗ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.