ಬೆಂಗಳೂರು: ರಾಜ್ಯ ಒಡೆಯುವ ಮಾತನ್ನು ಯಾರೇ ಆಡಿದರೂ, ಒಡಕು ಮಾತುಗಳು ಯಾವ ಮೂಲೆಯಿಂದ ಬಂದರೂ ಕೂಡ ಅದು ತಪ್ಪು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರ ಮೀಸಲಾತಿ ಹೇಳಿಕೆ ಕುರಿತು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಏಕೀಕರಣಕ್ಕಾಗಿ ಜಾತಿ, ಧರ್ಮ, ಮತ, ಪಂಥ ಬೇಧವಿಲ್ಲದೆ ನಮ್ಮ ಹಿರಿಯರು ತ್ಯಾಗ, ಸಮರ್ಪಣೆಯಿಂದ ಒಂದಾಗಿ ಹೋರಾಡಿದ ಪರಿಣಾಮವಾಗಿ ಕರ್ನಾಟಕ ಒಂದು ರಾಜ್ಯವಾಗಿದೆ. ಇದನ್ನು ಒಡೆಯುವ ಮಾತನ್ನು ಯಾರೇ, ಯಾವ ಉದ್ದೇಶಕ್ಕೇ ಆಡಿದರೂ ಖಂಡಿಸುತ್ತೇನೆ. ಒಡಕು ಮಾತುಗಳು ಯಾವ ಮೂಲೆಯಿಂದ ಬಂದರೂ ತಪ್ಪು’ ಎಂದು ತಿಳಿಸಿದ್ದಾರೆ.
‘ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರು ಒಕ್ಕಲಿಗ ಸಮಾಜದ ಮೀಸಲಾತಿಯ ವಿಷಯ ಮಂಡಿಸಲು ಸ್ವತಂತ್ರರು. ಆದರೆ ಅದಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ಸರಿಯಲ್ಲ. ಇದು ವಿಭಜಕ ಶಕ್ತಿಗಳಿಗೆ ಇನ್ನಷ್ಟು ಬಲ ತುಂಬುತ್ತದೆ. ಸ್ವಾಮೀಜಿ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ’ ಎಂದಿದ್ದಾರೆ.
‘ಅಖಂಡ ಕರ್ನಾಟಕ ಒಂದು ಜಾತಿ, ಒಂದು ಮತ, ಒಂದು ಧರ್ಮ, ಒಂದು ಪಂಥಕ್ಕೆ ಸೇರಿದ್ದಲ್ಲ. ಕನ್ನಡ ನುಡಿಯ ಹೆಸರಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ನಾವು ಒಂದಾಗಿಯೇ ಇದ್ದರಷ್ಟೆ ನಮ್ಮ ಅಸ್ತಿತ್ವ ಉಳಿಯಲು ಸಾಧ್ಯ. ಇಡೀ ಕರ್ನಾಟಕದ ಒಂದೇ ಒಂದು ಹಳ್ಳಿಯೂ ಬೇರೆಯಾಗಲು ನಾನು ಬದುಕಿರುವವರೆಗೂ ಅವಕಾಶ ನೀಡುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.