ADVERTISEMENT

‘ನಾರಾಯಣ ಗುರು ವಿಚಾರ ಪಠ್ಯಕ್ಕೆ ‌ಸೇರ್ಪಡೆ ಕಣ್ಣೊರೆಸುವ ತಂತ್ರ’

​ಪ್ರಜಾವಾಣಿ ವಾರ್ತೆ
Published 24 ಮೇ 2022, 18:55 IST
Last Updated 24 ಮೇ 2022, 18:55 IST

ಮಂಗಳೂರು: ‘10ನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದಿಂದ ನಾರಾಯಣ ಗುರು ಹಾಗೂ ಪೆರಿಯಾರ್ ವಿಚಾರಗಳನ್ನು ಕೈಬಿಟ್ಟು, ಅವಸರದಲ್ಲಿ ಅದನ್ನು ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದೊಳಗೆ ಸೇರಿಸಿರುವುದು ಗಾಯಕ್ಕೆ ಉಪ್ಪು ಸವರಿದಂತಾಗಿದೆ’ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಬಿಲ್ಲವ ಮುಖಂಡ ಪದ್ಮರಾಜ್‌ ಆರ್‌. ಆರೋಪಿಸಿದ್ದಾರೆ.

‘ಬಹುತೇಕ ಇಂಗ್ಲಿಷ್ ಹಾಗೂ ಅನ್ಯ ಭಾಷಾ ಮಾಧ್ಯಮ ಶಾಲೆಗಳಲ್ಲಿ ಐಚ್ಛಿಕ ವಿಷಯವಾಗಿರುವ ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿ ನಾರಾಯಣ ಗುರು ಹಾಗೂ ಇತರ ಸಮಾಜ ಸುಧಾರಕರ ಕುರಿತಾದ 8 ಪುಟಗಳ ಪಠ್ಯವನ್ನು ಅವಸರದಿಂದ ತುರುಕಿ, ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ಇದು ನಾರಾಯಣ ಗುರು ಅನುಯಾಯಿಗಳ ಕಣ್ಣೊರೆಸುವ ತಂತ್ರ’ ಎಂದು ಅವರು ದೂರಿದ್ದಾರೆ.

‘ರಾಜ್ಯದ ಎಲ್ಲ ವಿದ್ಯಾರ್ಥಿಗಳು ಅವಶ್ಯವಾಗಿ ಕಲಿಯಬೇಕಾದ ಸಮಾಜವಿಜ್ಞಾನ ಪಠ್ಯದ ಪ್ರಮುಖ ಅಂಗವಾದ ‘ಆಧುನಿಕ ಭಾರತದ ಸಮಾಜ ಸುಧಾರಕರ ವಿಭಾಗ’ದಲ್ಲಿ ನಾರಾಯಣ ಗುರುಗಳ ವಿಚಾರವನ್ನು ಕೈ ಬಿಟ್ಟು, ವಿದ್ಯಾರ್ಥಿಗಳ ಐಚ್ಛಿಕವಾದ ಪಠ್ಯದಲ್ಲಿ ಅದನ್ನು ಅವಸರವಾಗಿ ಅಳವಡಿಸಿರುವುದು ಮೊಣಕೈಗೆ ಬೆಲ್ಲ ಸವರಿದಂತೆ ಕಂಡು ಬರುತ್ತಿದೆ’ ಎಂದು ಬಿಲ್ಲವ ಮುಖಂಡ ರಾಜೇಂದ್ರ ಚಿಲಿಂಬಿ ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.