ಬೆಂಗಳೂರು: ‘ದಲಿತ... ದಲಿತ ಎಂದು ಪದೇ ಪದೇ ಹೇಳಿದ್ದೀರಿ. ಇದರಿಂದ ನನ್ನ ಎದೆಗೆ ನೂರು ಈಟಿಗಳಿಂದ ಚುಚ್ಚಿದಂತಾಗಿದೆ. ನನಗೆ ಅವಮಾನ, ನೋವು ಆಗಿದೆ’ ಎಂದು ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ ಏರಿದ ಧ್ವನಿಯಲ್ಲಿ ಹೇಳಿದಾಗ, ವಿಧಾನಸಭೆಯಲ್ಲಿ ಕೆಲ ಕಾಲ ಮೌನ ಆವರಿಸಿತು. ಎಲ್ಲರ ಬಾಯಿ ಕಟ್ಟಿತು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಚರ್ಚೆಯ ವೇಳೆ ಬಿಜೆಪಿಯ ಆರಗ ಜ್ಞಾನೇಂದ್ರ ಅವರು ದಲಿತರ ಹಣ ಎಂದು ಪ್ರಸ್ತಾಪಿಸಿದ ಬಗ್ಗೆ ನರೇಂದ್ರಸ್ವಾಮಿ ತೀವ್ರವಾಗಿ ಆಕ್ಷೇಪಿಸಿ, ‘ದಲಿತ ಪದ ಬಳಸಬಾರದು. ನಿನ್ನೆಯಿಂದಲೂ ಎಲ್ಲರೂ ಅದೇ ಪದ ಬಳಸುತ್ತಿದ್ದಾರೆ. ನನಗೆ ಅವಮಾನವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಎಂದು ಬಳಸಿ’ ಎಂದು ಆಗ್ರಹಿಸಿದರು.
ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ದಲಿತ ಎಂಬ ಪದವನ್ನು ಬಳಸುವ ಬಗ್ಗೆ ಅಂಬೇಡ್ಕರ್ ಅವರೇ ವಿರೋಧ ಮಾಡಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಎಂದು ಉಪಯೋಗಿಸಬೇಕು ಎಂದು ಹೇಳಿದ್ದರು. ಅದೇ ರೀತಿ ಬಳಸುವುದು ಸೂಕ್ತ ಎಂದರು.
ಈ ಕುರಿತು ಸಮಜಾಯಿಷಿ ನೀಡಿದ ವಿರೋಧಪಕ್ಷದ ನಾಯಕ ಆರ್.ಅಶೋಕ, ಇನ್ನು ಮುಂದೆ ಆ ಪದ ಬಳಸುವುದಿಲ್ಲ. ಪರಿಶಿಷ್ಟರು ಎಂದೇ ಬಳಸುತ್ತೇವೆ. ಅದೇ ರೀತಿಯಲ್ಲಿ ಕೆಲವು ಸಂಘಟನೆಗಳು ದಲಿತ ಎಂಬುದಾಗಿ ಬಳಸುವುದನ್ನೂ ನಿಷೇಧಿಸಬೇಕು ಎಂದು ಹೇಳಿದಾಗ, ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರೂ ಬೆಂಬಲಿಸಿದರು. ಸದನದಲ್ಲಿ ಪರಿಶಿಷ್ಟರು ಎಂಬ ಪದ ಬಳಸುವ ಬಗ್ಗೆ ಸಭಾಧ್ಯಕ್ಷರು ಒಂದು ರೂಲಿಂಗ್ ಹೊರಡಿಸಬೇಕು ಎಂದು ಸಲಹೆ ನೀಡಿದರು.
‘ದಲಿತ ಪದದ ಬದಲಿಗೆ ಪರಿಶಿಷ್ಟರು ಎಂದೇ ಕರೆಯಬೇಕು ಎಂದು ಸಂವಿಧಾನವೇ ಹೇಳಿದೆ. ಗಾಂಧೀಜಿಯವರು ಹರಿಜನ ಎಂದು ಕರೆದಾಗ ಅಂಬೇಡ್ಕರ್ ಅವರು ಅದನ್ನು ಬಲವಾಗಿ ವಿರೋಧಿಸಿದ್ದರು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.