ADVERTISEMENT

ದಾಭೋಲ್ಕರ್ ಹತ್ಯೆ ಪ್ರಕರಣ: ಸಿಬಿಐ ವಶದಲ್ಲಿ ಗೌರಿ ಲಂಕೇಶ್‌ ಹತ್ಯೆ ಆರೋಪಿ ಕಾಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 11:29 IST
Last Updated 6 ಸೆಪ್ಟೆಂಬರ್ 2018, 11:29 IST
ನರೇಂದ್ರ ದಾಭೋಲ್ಕರ್‌
ನರೇಂದ್ರ ದಾಭೋಲ್ಕರ್‌   

ಬೆಂಗಳೂರು: ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆಗಾಗಿಗೌರಿ ಲಂಕೇಶ್‌ ಹತ್ಯೆ ಪ್ರಮುಖ ಆರೋಪಿ ಅಮೋಲ್‌ ಕಾಳೆಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ಪಿಟಿಐ ಗುರುವಾರ ವರದಿ ಮಾಡಿದೆ.

ಪುಣೆ, 2013ರ ಆಗಸ್ಟ್‌ 20ರ ಬೆಳಿಗ್ಗೆ ವಿಹಾರಕ್ಕೆ ತೆರಳಿದ್ದ ದಾಭೋಲ್ಕರ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಗೌರಿ ಲಂಕೇಶ್‌ ಹತ್ಯೆ ಸಂಬಂಧ ಕರ್ನಾಟಕ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡ ಮೇನಲ್ಲಿ ಅಮೋಲ್‌ ಕಾಳೆನನ್ನು ವಶಕ್ಕೆ ಪಡೆದಿತ್ತು. ದಾಭೋಲ್ಕರ್‌ ಹತ್ಯೆಯಲ್ಲಿಯೂ ಈತನ ಕೈವಾಡ ಇರುವುದಾಗಿ ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ADVERTISEMENT

ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಸಚಿನ್ ಪ್ರಕಾಶ್‌ರಾವ್ ಅಂಧುರೆ‌ ಮತ್ತು ಅಮೋಲ್ ಕಾಳೆ ಮಹಾರಾಷ್ಟ್ರದ ಔರಂಗಬಾದ್‌ ಜಿಲ್ಲೆಯಲ್ಲಿ ಭೇಟಿ ಮಾಡಿದ್ದಾರೆ. ಕಾಳೆ, ಅಂಧುರೆಗೆ ಪಿಸ್ತೂಲ್‌ ನೀಡಿದ್ದು, ಅದೇ ಪಿಸ್ತೂಲ್‌ನ್ನು ಅಂಧುರೆ ತನ್ನ ಭಾವ ಶುಭಂ ಸುರ್ಲೆಗೆಕೊಟ್ಟಿದ್ದ. ಸಿಬಿಐ ಮತ್ತು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ ಸುರ್ಲೆಸ್ನೇಹಿತನ ಮನೆಯಲ್ಲಿ ನಡೆಸಿದ ಪರಿಶೀಲನೆಯಲ್ಲಿ ಪಿಸ್ತೂಲ್‌ ಪತ್ತೆಯಾಗಿತ್ತು.

ಬಂಗೇರ ಶಸ್ತ್ರಾಸ್ತ್ರ ತರಬೇತಿ ನೀಡಿದ್ದರೆ, ಅಮಿತ್ ಹಾಗೂ ಕಾಳೆಯು ಹತ್ಯೆಗೆ ಸಂಚು ರೂಪಿಸುವುದರ ಜತೆಗೆ ಹಂತಕನಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ.

ಸಿಬಿಐ ಕಾಳೆಯನ್ನು ಮಹಾರಾಷ್ಟ್ರದ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ. 2017ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಗೌರಿ ಲಂಕೇಶ್‌ ಹತ್ಯೆಯ ಆರೋಪಿಗಳಲ್ಲಿ ಮೂವರು ದಾಭೋಲ್ಕರ್‌ ಹತ್ಯೆ ಸಂಚಿನಲ್ಲೂ ಭಾಗಿಯಾಗಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದ ಸಿಬಿಐ,ಅಮೋಲ್ ಕಾಳೆ, ಅಮಿತ್ ಹಾಗೂ ಬಂಗೇರನನ್ನು ವಶಕ್ಕೆ ಪಡೆಯಲು ಅನುಮತಿ ಕೋರಿ ಪುಣೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಬೆಂಗಳೂರಿಗೆ ಬಂದ ಸಿಬಿಐ ತಂಡ,ಪರಪ್ಪನ ಅಗ್ರಹಾರ ಕಾರಾಗೃಹದಿಂ ಅಮಿತ್ ಹಾಗೂ ಬಂಗೇರನನ್ನು ವಶಕ್ಕೆ ಪಡೆದುಕೊಂಡಿತು. ಶನಿವಾರ ಮಧ್ಯಾಹ್ನ ಅವರನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹತ್ತುದಿನ ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.