ADVERTISEMENT

ಮೋದಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ಬರ್ತಾರೆ: ಕುಮಾರಸ್ವಾಮಿ 

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 12:28 IST
Last Updated 9 ಏಪ್ರಿಲ್ 2019, 12:28 IST
   

ಬೆಂಗಳೂರು: ನರೇಂದ್ರ ಮೋದಿ ಬೆಳಗ್ಗೆದ್ದ ಕೂಡಲೇ ಮೇಕಪ್ ಮಾಡಿಕೊಳ್ಳುತ್ತಾರೆ. ಮುಖ ಹೊಳೆಯುವುದಕ್ಕಾಗಿ ವ್ಯಾಕ್ಸ್ ಮಾಡಿಕೊಳ್ಳುತ್ತಾರೆ.ಆಮೇಲೆ ಕ್ಯಾಮೆರಾ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ನಾವು ಬೆಳಗ್ಗೆ ಒಂದು ಬಾರಿ ಸ್ನಾನ ಮಾಡಿದರೆ ಮತ್ತೆ ಮರುದಿನವೇ ಮುಖ ತೊಳೆಯುವುದು. ಹಾಗಾಗಿ ಕ್ಯಾಮೆರಾದಲ್ಲಿ ನಮ್ಮ ಮುಖ ಚೆನ್ನಾಗಿ ಕಾಣುವುದಿಲ್ಲ. ಆದ್ದರಿಂದಲೇ ಮಾಧ್ಯಮಗಳು ಕೂಡಾ ಮೋದಿಯನ್ನೇ ತೋರಿಸುತ್ತವೆ ಎಂದುಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ಉಡುಪಿಯಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಪ್ರಧಾನಿ ಮೋದಿ ರಾಜ್ಯದ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದರೆ ಬೆಂಬಲಿಸಿ. ಆದರೆ, ಕೋಟ್ಯಂತರ ಯುವಕರ ಜೀವನವನ್ನು ಬೀದಿಪಾಲು ಮಾಡಿದ ಮೋದಿ ಅವರಿಗೆ ಮತ ಹಾಕುವುದು ಸರಿಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಯುವಕರು ಬೀದಿ ಬೀದಿಯಲ್ಲಿ ಮೋದಿ ಮೋದಿ ಎಂದು ನೃತ್ಯ ಮಾಡಿದರೆ ಪ್ರಯೋಜನ ಇಲ್ಲ’ ಎಂದರು.

ADVERTISEMENT

ಕಾಂಗ್ರೆಸ್‌ ಪಕ್ಷದ ಜತೆಗಿನ ಹೊಂದಾಣಿಕೆಯ ಬಗ್ಗೆ ಮೋದಿ ಲಘುವಾಗಿ ಮಾತನಾಡುತ್ತಾರೆ. ದೇಶದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿದೇ ಬಿಜೆಪಿ 13 ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇಷ್ಟಾದರೂ ವಿರೋಧ ಪಕ್ಷಗಳ ಹೊಂದಾಣಿಕೆ ಬಗ್ಗೆ ವಾಗ್ದಾಳಿ ಮಾಡುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಹಲವು ರೀತಿಯಲ್ಲಿ ಅಡ್ಡಿಮಾಡಿದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದೇವೆ. ಕೃಷಿ ವಲಯಕ್ಕೆ ₹ 46,000 ಕೋಟಿ ಅನುದಾನ ನೀಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಭತ್ತ ಬೆಳೆಯಲು ಹೆಕ್ಟೇರ್‌ಗೆ ₹ 7,500 ಸಬ್ಸಿಡಿ ನೀಡಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಯ ರೈತರ ಸಾಲ ಮನ್ನಾ ಮಾಡಲು ₹ 80 ಕೋಟಿ ಹಣ ಬಿಡುಗಡೆಯಾಗಿದೆ. ರಾಜ್ಯದಲ್ಲಿ 15,58 ಲಕ್ಷ ರೈತರ ಕುಟುಂಬಗಳಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗುತ್ತಿದೆ. 18–19 ಸಾಲಿನಲ್ಲಿ ₹ 6,500 ಕೋಟಿ ಹಣ ರೈತರ ಖಾತೆಗೆ ಈಗಾಗಲೇ ಜಮೆಯಾಗಿದೆ. ಉಳಿದ ಹಣ ಬಿಡುಗಡೆಗೆ ಚುನಾವಣಾ ಆಯೋಗ ತಡೆಯೊಡ್ಡಿದೆ ಎಂದರು.

ಮೈತ್ರಿ ಸರ್ಕಾರ ಬಂದ ಬಳಿಕ ಗಲಭೆಗಳು ನಡೆಯುತ್ತಿಲ್ಲ, ಎಲ್ಲ ಸಮಾಜಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಕರಾವಳಿ ಮಲೆನಾಡಿನಲ್ಲಿ 1,500 ಕಾಲುಸಂಕಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲಾಗುತ್ತಿದೆ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.