ಬೆಂಗಳೂರು: ‘ಸಮರೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಂಡು ಮುಂದಿನ ಆರು ತಿಂಗಳಲ್ಲಿ ಕೋವಿಡ್ ನಿಯಂತ್ರಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚಿಸಿದೆ.
ಕೋವಿಡ್ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಿಡಿಯೊ ಸಂವಾದ ನಡೆಸಿದರು.
‘ಕರ್ನಾಟಕದಲ್ಲಿ ಹೆಚ್ಚಿನ ಪರೀಕ್ಷೆ ಗಳಾಗುತ್ತಿವೆ. ವೈಜ್ಞಾನಿಕ ಪರೀಕ್ಷೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಕೋವಿಡ್‍ನಿಂದ ಮರಣ ಹೊಂದಿರುವವರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಗಮನಹರಿಸ ಬೇಕು. ಸರ್ವೇಕ್ಷಣೆ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ಮೂರು ಪಟ್ಟು ಹೆಚ್ಚಿಸಬೇಕು’ ಎಂದೂ ಕೇಂದ್ರ ನಿರ್ದೇಶನ ನೀಡಿದೆ.
‘ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕೋವಿಡ್ ಲಕ್ಷಣಗಳಿರುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಬೇಕು. ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳುವ ಕುರಿತು ಮಾಧ್ಯಮ ಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಈ ಬಗ್ಗೆ ಅರಿವು ಮೂಡಿಸಲು ಜನಾಂದೋಲನ ರೂಪಿಸಬೇಕು’ ಎಂದೂ ಸಲಹೆ ನೀಡಲಾಗಿದೆ.
‘ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಜೊತೆಗೆ ನಿರ್ಬಂಧಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೀವ ಹಾಗೂ ಜೀವನ ಉಳಿಸುವ ಉದ್ದೇಶದಿಂದ ಆರ್ಥಿಕ ಚಟುವಟಿಕೆಯನ್ನು ಸೂಕ್ತ ಪರೀಕ್ಷಾ ಮತ್ತು ಆಸ್ಪತ್ರೆ ಸೌಕರ್ಯಗಳನ್ನು ಖಚಿತಪಡಿಸಿಕೊಂಡು ಹಂತ ಹಂತವಾಗಿ ಆರಂಭಿಸಬೇಕು. ಮನೆ ಆರೈಕೆಯಲ್ಲಿರುವ ಸೋಂಕಿತರ ನಿರಂತರ ಮೇಲ್ವಿಚಾರಣೆ ಕಡ್ಡಾಯ. ಸೂಕ್ಷ್ಮ ಕಂಟೈನ್‌ಮೆಂಟ್ ವಲಯಗಳನ್ನು ರೂಪಿಸಬೇಕು’ ಎಂದೂ ಸಲಹೆ ನೀಡಲಾಗಿದೆ.
ಕೋವಿಡ್ ನಿಯಂತ್ರಿಸಲು ರಾಜ್ಯದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ವಿವರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಕೇಂದ್ರದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ನೂತನ ಆಕ್ಸಿಜನ್ ಘಟಕ ಗಳನ್ನು ಕೈಗಾರಿಕೆಗಳು ಸ್ಥಾಪಿಸುವಂತೆ ಉತ್ತೇಜಿಸಲು ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಆಸ್ಪತ್ರೆಗಳ ಮಟ್ಟದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಹಾಜರಿದ್ದರು.
ಮುಖ್ಯಮಂತ್ರಿ ಜೊತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹಾಗೂ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಕೂಡಾ ಇದ್ದರು.
ಬೆಂಗಳೂರು ಕ್ಲಬ್‌ನಿಂದ ₹ 36 ಲಕ್ಷ ದೇಣಿಗೆ
ಮುಖ್ಯಮಂತ್ರಿ ಕೋವಿಡ್–19 ಪರಿಹಾರ ನಿಧಿಗೆ ಬೆಂಗಳೂರು ಕ್ಲಬ್ ಸದಸ್ಯರು ₹ 36 ಲಕ್ಷ ನೀಡಿದ್ದಾರೆ.
152 ವರ್ಷದ ಹಳೆಯದಾದ ಈ ಕ್ಲಬ್ ಸಾಮಾಜಿಕ ಕಾರ್ಯಗಳಿಗೆ ಸ್ಪಂದಿಸುವ ಜತೆಗೆ ಸರ್ಕಾರದ ಜತೆಗೆ ಕೂಡ ಕೈಜೋಡಿಸುತ್ತಾ ಬಂದಿದೆ. ಕೋವಿಡ್‌ನಿಂದಾಗಿ ರಾಜ್ಯ ಸಂಕಷ್ಟವನ್ನು ಎದುರಿಸುತ್ತಿರುವ ಕಾರಣ ಕ್ಲಬ್‌ನ ಸದಸ್ಯರು ಸ್ವಯಂಪ್ರೇರಿತರಾಗಿ ಹಣವನ್ನು ನೀಡಿದ್ದಾರೆ. ಈಚೆಗೆ ನಡೆದ ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಲಬ್‌ನ ಸದಸ್ಯರು ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.