ADVERTISEMENT

ಯಾದಗಿರಿ: ನೀರಾವರಿ ಯೋಜನೆಗೆ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 7:11 IST
Last Updated 19 ಜನವರಿ 2023, 7:11 IST
   

ಯಾದಗಿರಿ: ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಂತೆ ಸಭಿಕರಿಂದ ಹರ್ಷೋದ್ಗಾರ ವ್ಯಕ್ತವಾಯಿತು. ಮೋದಿ..ಮೋದಿ ಎಂದು ಘೋಷಣೆ ಹಾಕುತ್ತ ಜನರು ಸಂಭ್ರಮಿಸಿದರು. ಮೋದಿಯವರು ಎಲ್ಲರನ್ನೂ ಕೈ ಬೀಸಿ, ನಮಸ್ಕರಿಸಿದರು.

ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್‌ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು. ಎಕ್ಸ್‌ಪ್ರೆಸ್‌ ವೇ, ಬಹುಗ್ರಾಮ ಕುಡಿಯುವ ನೀರು ಯೋಜನೆಗೂ ಚಾಲನೆ ನೀಡಿದರು. ಯೋಜನೆಗಳ ಕಿರುಚಿತ್ರವನ್ನು ಪ್ರಸಾರ ಮಾಡಲಾಯಿತು.

ಸ್ವಾಗತ ಭಾಷಣ ಮಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ‘ನರೇಂದ್ರ ಮೋದಿ ಅವರ ಉತ್ತಮ ಆಡಳಿತದಿಂದ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಮತ್ತು ಸರ್ವರ ಏಳ್ಗೆಗೆ ಪ್ರಧಾನಿಯವರು ಶ್ರಮಿಸುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ನೀಡುತ್ತಿದ್ದಾರೆ’ ಎಂದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಿತ್ತು’ ಎಂದರು.

‘ಮೋದಿಯವರ ಸಮರ್ಥ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರವು ನೀರಾವರಿ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನ ಮಾಡುತ್ತಿದೆ. ಯಾವುದೇ ಪ್ರದೇಶ ರೈತರು ನೀರ ಸಮಸ್ಯೆ ಎದುರಿಸಬಾರದು ಎಂಬುದಕ್ಕೆ ಒತ್ತು ನೀಡಲಾಗುತ್ತಿದೆ’ ಎಂದರು.‌

‘ಮುಂದಿನ 10 ವರ್ಷಗಳವರೆಗೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಧಿಕ ಅನುದಾನವನ್ನು ಬಿಡುಗಡೆ ಮಾಡಿ, ಕೃಷಿ ಜಮೀನುಗಳಿಗೆ ನೀರು ತಲುಪುವಂತೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.