
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯದಲ್ಲಿ ಯುವ ಆಯೋಗವನ್ನು ಸ್ಥಾಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ರಾಜ್ಯ ಘಟಕದ ಅಧ್ಯಕ್ಷ ನಸೀಮ್ ಅಹ್ಮದ್ ಆಗ್ರಹಿಸಿದ್ದಾರೆ.
ಯುವಜನರು ಎದುರಿಸುತ್ತಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಆರೋಗ್ಯ ಮತ್ತು ಉದ್ಯೋಗ ಸಂಬಂಧಿತ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಲು ಯುವ ಆಯೋಗ ಸಹಾಯಕವಾಗಲಿದೆ. ಕೇರಳ, ಅಸ್ಸಾಂ, ಮಿಜೋರಾಂ ಮತ್ತು ಬಿಹಾರದಲ್ಲಿ ಯುವ ಆಯೋಗವಿದ್ದು, ಯುವಜನರ ಹಕ್ಕುಗಳ ರಕ್ಷಣೆ, ನೀತಿ ನಿರೂಪಣೆ, ಕೌಶಲ ಅಭಿವೃದ್ಧಿ, ಉದ್ಯೋಗ, ಮಾದಕ ವ್ಯಸನ ವಿರೋಧಿ ಕ್ರಮಗಳು ಮತ್ತು ಮಾನಸಿಕ ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಯುವ ಆಯೋಗ ಸ್ಥಾಪಿಸುವುದಾಗಿ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಯುವ ಆಯೋಗ ಸ್ಥಾಪನೆಗೆ ಅಧಿಸೂಚನೆ ಹೊರಡಿಸುವ ಮೂಲಕ ಈ ಭರವಸೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಯುವ ಆಯೋಗ ಸ್ಥಾಪಿಸಿ ಅದಕ್ಕೆ ಯುವಕರ ಹಕ್ಕುಗಳ ರಕ್ಷಣೆ ಹಾಗೂ ಉಲ್ಲಂಘನೆಗಳ ತನಿಖೆಯ ಅಧಿಕಾರ ನೀಡಬೇಕು. ಶಿಕ್ಷಣ, ಉದ್ಯೋಗ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕುರಿತು ಶಿಫಾರಸುಗಳು ಆಯೋಗದ ಮೂಲಕ ಆಗಬೇಕು. ಮಾನಸಿಕ ಆರೋಗ್ಯ, ವ್ಯಸನ ವಿರೋಧಿ ಕ್ರಮಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ಪರಿಣಾಮಕಾರಿ ಕಾರ್ಯತಂತ್ರ, ಯುವಕರ ದೂರುಗಳ ಪರಿಹಾರಕ್ಕೆ ವ್ಯವಸ್ಥಿತ ಮತ್ತು ಪಾರದರ್ಶಕ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಯುವಕರ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವವನ್ನು ಉತ್ತೇಜಿಸಬೇಕು. ವಿಧಾನಸಭೆ, ವಿಧಾನ ಪರಿಷತ್ ಮತ್ತು ವಿವಿಧ ನಾಮನಿರ್ದೇಶಿತ ಸಂಸ್ಥೆಗಳಲ್ಲಿ ಯುವಕರ ಪ್ರಾತಿನಿಧ್ಯವನ್ನು ಖಚಿತಪಡಿಸಬೇಕು. ನಿಗಮ, ಮಂಡಳಿ, ಸಮಿತಿ, ಇತರ ಸರ್ಕಾರಿ ಸಂಸ್ಥೆಗಳಲ್ಲಿ ಯುವ ಪ್ರಾತಿನಿಧ್ಯ ಇರುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.