ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಮಾದಕ ವಸ್ತು ಬಳಕೆ ನಿಯಂತ್ರಿಸಲು ಪೊಲೀಸ್ ಇಲಾಖೆಯು ‘ನಶೆ ಮುಕ್ತ ಕರ್ನಾಟಕ’ ಹೆಸರಿನ ಮೊಬೈಲ್ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಿದೆ.
ಗಾಂಜಾ ಬೆಳೆಯುತ್ತಿರುವ ಬೆಳೆಗಾರರು, ಅದನ್ನು ಮಾರಾಟ ಮಾಡುತ್ತಿರುವವರು, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿರುವ ಪ್ರಯೋಗಾಲಯಗಳು, ಸಂಗ್ರಹಣೆ ಮಾಡುತ್ತಿರುವ ಸಂಗ್ರಹಕಾರರು, ಸಾಗಾಣಿಕೆ ಮಾಡುತ್ತಿರುವ ಸಾರಿಗೆ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಇದ್ದರೆ ಅದನ್ನು ಪೊಲೀಸರಿಗೆ ಗೋಪ್ಯವಾಗಿ ಹಂಚಿಕೊಳ್ಳಲು ಈ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಮಾದಕ ವಸ್ತುವಿನ ಕುರಿತಾಗಿ ಇಂಗ್ಲಿಷ್ ಅಥವಾ ಕನ್ನಡದಲ್ಲಿ ವರದಿ ಮಾಡಬಹುದಾಗಿದೆ.
ಸಾರ್ವಜನಿಕರು ಹಂಚಿಕೊಂಡ ಮಾಹಿತಿ ಲೊಕೇಷನ್ ಅನ್ನು ಸ್ಥಳೀಯ ಪೊಲೀಸರು, ಡಿಸಿಪಿ, ಎಸ್‌ಪಿ ಹಾಗೂ ಉಸ್ತುವಾರಿ ಮೇಲಾಧಿಕಾರಿಗಳಿಗೆ ಹಂಚಿಕೊಳ್ಳುತ್ತಾರೆ. ಮಾಹಿತಿ ಪಡೆದ ಅಧಿಕಾರಿಯು, ಆ ಮಾಹಿತಿಯ ನೈಜತೆ ಖಾತ್ರಿ ಪಡಿಸಿಕೊಂಡು ದಾಳಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಮಾದಕ ವಸ್ತು ಮತ್ತು ನಿದ್ರಾಜನ್ಯ ಪದಾರ್ಥಗಳ ಕಾಯ್ದೆ–1985ರ ಅಡಿ ಜರುಗಿಸಬಹುದಾದ ಅಪರಾಧಗಳಿಗೆ ಶಿಕ್ಷೆಯ ಮಾಹಿತಿ, ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮಾದಕ ವಸ್ತುವಿನ ದುಷ್ಪರಿಣಾಮಗಳು, ಸಾರ್ವಜನಿಕರು ಪೊಲೀಸರಿಗೆ ಮಾದಕ ವಸ್ತುವಿನ ಕಳ್ಳ ಸಾಗಾಣಿಕೆ, ಮಾದಕ ಬೆಳೆಯ ಕೃಷಿ, ಅವುಗಳ ಸಂಗ್ರಹಣೆ, ಮಾದಕ ವ್ಯಸನಿಗಳ ಕುರಿತಾದ ಮಾಹಿತಿ, ಮಾದಕ ವಸ್ತುವಿನ ತಯಾರಿಕಾ ಘಟಕಗಳ ಕುರಿತಾಗಿ ಗೋಪ್ಯ ಮಾಹಿತಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.